55ನೇ ಡೇವಿಸ್ ಕಪ್ ಪಂದ್ಯವನ್ನಾಡಿದ ಪೇಸ್, ಈ ಪಂದ್ಯದಲ್ಲಿ ಜಯಶಾಲಿಯಾಗಿದ್ದೇ ಆಗಿದ್ದರೆ, ಇಟಲಿ ಆಟಗಾರ ನಿಕೋಲಾ ಪಿಟ್ರಾಂಜೆಲಿ ಅವರು ಡೇವಿಸ್ ಕಪ್‌ನಲ್ಲಿ ನಿರ್ಮಿಸಿದ್ದ 42 ಗೆಲುವಿನ ದಾಖಲೆಯನ್ನು ಮೆಟ್ಟಿನಿಲ್ಲುತ್ತಿದ್ದರು.
ಪುಣೆ(ಫೆ.04): ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಐತಿಹಾಸಿಕ ಗೆಲುವಿನ ಕನಸಿನಲ್ಲಿದ್ದ ಭಾರತದ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಅವರ ಕನಸು ಇಂದು ನುಚ್ಚುನೂರಾಯಿತು.
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಡೇವಿಸ್ ಕಪ್ ಏಷ್ಯಾ ಒಷೇನಿಯಾ ಗ್ರೂಪ್ ಮೊದಲ ಹಂತದ ಕಾದಾಟದ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಜತೆಯಾಟಗಾರ ವಿಷ್ಣುವರ್ಧನ್ ಜತೆಗೆ ಆರ್ಟೆಮ್ ಸಿಟಾಕ್ ಹಾಗೂ ಮೈಕಲ್ ವೀನಸ್ ವಿರುದ್ಧದ ಪಂದ್ಯದಲ್ಲಿ 6-3, 3-6, 6-7 (6), 3-6 ಸೆಟ್ಗಳಿಂದ ಸೋಲಪ್ಪಿದರು.
ಶುಕ್ರವಾರ ಆರಂಭವಾದ ಟೂರ್ನಿಯ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಯೂಕಿ ಭಾಂಬ್ರಿ ಹಾಗೂ ರಾಮ್ಕುಮಾರ್ ರಾಮನಾಥನ್ ಭರ್ಜರಿ ಗೆಲುವು ಸಾಧಿಸಿ 2-0 ಮುನ್ನಡೆ ತಂದುಕೊಟ್ಟಿದ್ದರಾದರೂ, ಪೇಸ್ ಜೋಡಿಯ ಅನಿರೀಕ್ಷಿತ ಸೋಲಿನಿಂದ ಕಿವೀಸ್ ತಿರುಗೇಟು ನೀಡಿತು. ಹೀಗಾಗಿ 2-1ರ ಫಲಿತಾಂಶ ಕಂಡಿರುವ ಭಾರತ, ಭಾನುವಾರ ನಡೆಯಲಿರುವ ರಿವರ್ಸ್ ಸಿಂಗಲ್ಸ್ನ ಯಾವುದಾದರು ಒಂದು ಪಂದ್ಯದಲ್ಲಿ ಗೆದ್ದರೂ, ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.
ಅಂದಹಾಗೆ ಮೊದಲ ಸೆಟ್ ಅನ್ನು ಗೆದ್ದ ಪೇಸ್ ಜೋಡಿಗೆ ಸ್ಥಳೀಯ ಅಭಿಮಾನಿಗಳು ಭರ್ಜರಿ ಬೆಂಬಲ ನೀಡಿ ಪ್ರೋತ್ಸಾಹಿಸಿದರಾದರೂ, ಆನಂತರದ ಮೂರೂ ಸೆಟ್'ಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕಿವೀಸ್ ಜೋಡಿ ಜಯಭೇರಿ ಬಾರಿಸಿತು. ವಾಸ್ತವವಾಗಿ ಈ ಬಾರಿಯ ಡೇವಿಸ್ ಕಪ್ ಪೇಸ್ ಅವರ ವೃತ್ತಿಬದುಕಿನ ಕಟ್ಟಕಡೆಯದ್ದೆಂದು ಬಿಂಬಿತವಾಗಿತ್ತು. 55ನೇ ಡೇವಿಸ್ ಕಪ್ ಪಂದ್ಯವನ್ನಾಡಿದ ಪೇಸ್, ಈ ಪಂದ್ಯದಲ್ಲಿ ಜಯಶಾಲಿಯಾಗಿದ್ದೇ ಆಗಿದ್ದರೆ, ಇಟಲಿ ಆಟಗಾರ ನಿಕೋಲಾ ಪಿಟ್ರಾಂಜೆಲಿ ಅವರು ಡೇವಿಸ್ ಕಪ್ನಲ್ಲಿ ನಿರ್ಮಿಸಿದ್ದ 42 ಗೆಲುವಿನ ದಾಖಲೆಯನ್ನು ಮೆಟ್ಟಿನಿಲ್ಲುತ್ತಿದ್ದರು. ದುರದೃಷ್ಟವಶಾತ್ ಆ ಸಾಧನೆ ಪೇಸ್ ಅವರಿಂದ ಸಾಧ್ಯವಾಗಲಿಲ್ಲ.
