ವೇತನ ಹೆಚ್ಚಳ ವಿಚಾರವಾಗಿ ಬಿಸಿಸಿಐಯೊಂದಿಗೆ ಹಗ್ಗಜಗ್ಗಾಟ ನಡೆಸುತ್ತಿರುವ ಭಾರತ ತಂಡದ ಕೋಚ್‌ ಅನಿಲ್‌ ಕುಂಬ್ಳೆ, ತಮ್ಮ ಸ್ವಾರ್ಥಕ್ಕಾಗಿ ನಾಯಕ ವಿರಾಟ್‌ ಕೊಹ್ಲಿಯನ್ನು ಬಳಸಿಕೊಂಡರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈ ಕುರಿತು ಐಬಿಎನ್‌ ಸುದ್ದಿ ಸಂಸ್ಥೆಯ ‘ಕ್ರಿಕೆಟ್‌ ನೆಕ್ಸ್ಟ್‌' ವೆಬ್‌ಸೈಟ್‌ ವರದಿ ಮಾಡಿದೆ.

ನವದೆಹಲಿ(ಮೇ.27): ವೇತನ ಹೆಚ್ಚಳ ವಿಚಾರವಾಗಿ ಬಿಸಿಸಿಐಯೊಂದಿಗೆ ಹಗ್ಗಜಗ್ಗಾಟ ನಡೆಸುತ್ತಿರುವ ಭಾರತ ತಂಡದ ಕೋಚ್‌ ಅನಿಲ್‌ ಕುಂಬ್ಳೆ, ತಮ್ಮ ಸ್ವಾರ್ಥಕ್ಕಾಗಿ ನಾಯಕ ವಿರಾಟ್‌ ಕೊಹ್ಲಿಯನ್ನು ಬಳಸಿಕೊಂಡರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈ ಕುರಿತು ಐಬಿಎನ್‌ ಸುದ್ದಿ ಸಂಸ್ಥೆಯ ‘ಕ್ರಿಕೆಟ್‌ ನೆಕ್ಸ್ಟ್‌' ವೆಬ್‌ಸೈಟ್‌ ವರದಿ ಮಾಡಿದೆ.

ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರ ವೇತನ ಹೆಚ್ಚಿಸುವಂತೆ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಎದುರು ಪ್ರಸ್ತಾಪಿಸಿದ ಕುಂಬ್ಳೆಯ ನಿರ್ಧಾರಕ್ಕೆ ವಿರಾಟ್‌ ವಿರೋಧಿಸಿದ್ದರು ಎನ್ನಲಾಗಿದೆ. ಪ್ರಮುಖವಾಗಿ ತಂಡದ ನಾಯಕನಿಗೆ ಹೆಚ್ಚು ಸಂಭಾವನೆ ಸಿಗಬೇಕು ಎನ್ನುವುದನ್ನು ಕೊಹ್ಲಿ ಒಪ್ಪದೆ, ಎಲ್ಲಾ ಆಟಗಾರರಿಗೂ ಸಮನಾದ ಗೌರವ ಸಿಗಬೇಕು ಎಂದಿದ್ದಾರೆ ಎಂದು ವರದಿಯಲ್ಲಿ ಹೇಳÇ­ಾಗಿದೆ. ಅಲ್ಲದೇ ವಿರಾಟ್‌ ವಯಕ್ತಿಕವಾಗಿ ಸಂಭಾವನೆ ಹೆಚ್ಚಿಸುವಂತೆ ಮನವಿ ಮಾಡಿಲ್ಲ ಎನ್ನುವುದು ಸಹ ತಿಳಿದುಬಂದಿದೆ. ಈ ವಿವರಗಳನ್ನು ಹೆಸರು ಬಹಿರಂಗ ಪಡಿಸಬಾರದು ಎಂಬ ಷರತ್ತಿನ ಮೇಲೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಬಿಚ್ಚಿಟ್ಟಿದ್ದಾರೆ.

‘‘ಕೊಹ್ಲಿ ಎಂದಿಗೂ ವೇತನ ಹೆಚ್ಚಳದ ಬಗ್ಗೆ ತುಟಿಬಿಚ್ಚಿಲ್ಲ. ನಾನೇ ಅವರೊಂದಿಗೆ ವಯಕ್ತಿಕವಾಗಿ ಎರಡು-ಮೂರು ಬಾರಿ ಮಾತನಾಡಿದ್ದೇನೆ. ಪ್ರತಿ ಬಾರಿಯೂ ಅವರು ಎಲ್ಲಾ ಆಟಗಾರರನ್ನೂ ಸಮನಾಗಿ ನಡೆಸಿಕೊಳ್ಳಲು ನನ್ನಲ್ಲಿ ಮನವಿ ಮಾಡಿಕೊಂಡರು. ಅದರಲ್ಲೂ ಕೇವಲ ಒಂದೇ ಮಾದರಿಯಲ್ಲಿ ಆಡುವ ಆಟಗಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಹ ಅವರು ಕೇಳಿಕೊಂಡರು'' ಎಂದಿದ್ದಾರೆ.

ಕುಂಬ್ಳೆ ಅವರ ಯೋಜನೆಗಳ ಕುರಿತು ಮಾತನಾಡಿರುವ ಅವರು ‘‘ಕುಂಬ್ಳೆ ತಾವು ಸಲ್ಲಿಸುತ್ತಿರುವ ಪ್ರಸ್ತಾಪಕ್ಕೆ ಬಲ ತುಂಬುವ ಸಲುವಾಗಿ ಕೊಹ್ಲಿ ಸೇರಿದಂತೆ ಇನ್ನಿತರರ ಹೆಸರುಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ನಾಯಕನಿಗೆ ಹೆಚ್ಚುವರಿ ವೇತನ ಸಿಗಬೇಕು ಎನ್ನುವ ಅವರ ವಾದ, ಖಂಡಿತವಾಗಿಯೂ ಎಲ್ಲರನ್ನೂ ಬೆರಗಾಗಿಸಿದೆ'' ಎಂದಿದ್ದಾರೆ.

ಗುರುವಾರವಷ್ಟೇ ಬಿಸಿಸಿಐ ಕುಂಬ್ಳೆ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸದೆ, ಕೋಚ್‌ ಹುದ್ದೆಗೆ ನೂತನ ಅರ್ಜಿಗಳಿಗೆ ಆಹ್ವಾನಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿರಾಟ್‌ ಕೊಹ್ಲಿ, ಬಿಸಿಸಿಐ ಮಾಡುತ್ತಿರುವುದರಲ್ಲಿ ತಪ್ಪೇನಿಲ್ಲ. ಗುತ್ತಿಗೆ ಅವಧಿ ಕೇವಲ ಒಂದು ವರ್ಷಕ್ಕೆ ಮಾತ್ರ ಆಗಿದ್ದರಿಂದ, ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸಿದ ಕೋಚ್‌ ಆಯ್ಕೆ ನಡೆಸುವುದು ಸೂಕ್ತ ಎಂದು ಬಿಸಿಸಿಐ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರ ವೇತನವನ್ನು ಶೇ.150ರಷ್ಟುಹೆಚ್ಚಿಸುವಂತೆ ಹಾಗೂ ತಮ್ಮ ವೇತನವನ್ನೂ .7.5 ಕೋಟಿಗೆ ಏರಿಸಲು ಕುಂಬ್ಳೆ ಪ್ರಸ್ತಾಪ ಸಲ್ಲಿಸಿರುವುದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಸಿಟ್ಟಿಗೆ ಕಾರಣವಾಗಿದೆ ಎಂದಿರುವ ಅಧಿಕಾರಿ, ‘‘ಕುಂಬ್ಳೆ ತಂಡದ ಕೋಚ್‌ ಆಗಿ ಸಾಧಿಸುತ್ತಿರುವ ಯಶಸ್ಸನ್ನು ಮುಂದಿಟ್ಟುಕೊಂಡು ತಮ್ಮ ಕೆಲಸ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಕ್ರಿಕೆಟ್‌ ಕೇವಲ ಒಬ್ಬರು ಆಡುವ ಆಟವಲ್ಲ. ಇಲ್ಲಿ ಸಿಗುವ ಯಶಸ್ಸು ಇಡೀ ತಂಡದ ಪರಿಶ್ರಮಕ್ಕೆ ಸಿಕ್ಕಿದ್ದಾಗಿರುತ್ತದೆ. ಸದ್ಯ ದೊರೆತಿರುವ ಯಶಸ್ಸಿನಲ್ಲಿ ಆಟಗಾರರು ಹಾಗೂ ಇತರೆ ಸಹಾಯಕ ಸಿಬ್ಬಂದಿಯ ಪಾತ್ರವೂ ಇದೆ ಎನ್ನುವುದನ್ನು ಅವರು ಮರೆತಿದ್ದಾರೆ'' ಎಂದಿದ್ದಾರೆ.

‘‘ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಅವರು ಹಣ ಸಂಪಾದನೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದು ತಪ್ಪು. ಆಟಗಾರನಾಗಿ ಸಾಧಿಸಿದ ಗೌರವವನ್ನು ಅವರು ಹಣಕ್ಕಾಗಿ ಕಳೆದುಕೊಳ್ಳುತ್ತಿದ್ದಾರೆ'' ಎಂದಿರುವ ಆ ಹಿರಿಯ ಅಧಿಕಾರಿ, ‘‘ಕುಂಬ್ಳೆ ಅವರ ಪ್ರಸ್ತಾಪವನ್ನು ಒಪ್ಪಿಕೊಂಡು ಅದರನ್ವಯ ವೇತನ ನೀಡಿದರೆ, ಒಂದಿಬ್ಬರು ಆಟಗಾರರಿಗೆ ರಾಜ್ಯ ಸಂಸ್ಥೆಗಳಿಗೆ ಸಿಗುವಷ್ಟೇ ಹಣ ಸಿಗಲಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ'' ಎಂದಿದ್ದಾರೆ. ಜತೆಗೆ ‘‘ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಇರಬಹುದು. ಆದರೆ ನಮಗೆ ಎಷ್ಟುಖರ್ಚಿದೆ ಎನ್ನುವುದನ್ನೂ ಸಹ ಗಮನದಲ್ಲಿಟ್ಟುಕೊಳ್ಳಬೇಕು. ಮಾಜಿ ಆಟಗಾರರು-ಆಟಗಾರ್ತಿಯರಿಗೆ ಪಿಂಚಣಿ ನೀಡಲು ಬಿಸಿಸಿಐ ಎಷ್ಟುಖರ್ಚು ಮಾಡುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು'' ಎಂದಿದ್ದಾರೆ.

ಸದ್ಯ ಅನಿಲ್‌ ಕುಂಬ್ಳೆ ಭಾರತ ತಂಡದೊಂದಿಗೆ ಇಂಗ್ಲೆಂಡ್‌ನಲ್ಲಿದ್ದು, ತಂಡ ಚಾಂಪಿಯನ್ಸ್‌ ಟ್ರೋಫಿ ಉಳಿಸಿಕೊಳ್ಳಲು ಹೋರಾಡಲಿದೆ. ಕುಂಬ್ಳೆ ಕೋಚ್‌ ಆಗಿ ಆಗಮಿಸಿದ ಬಳಿಕ ಆಡಿದ ಎಲ್ಲಾ ಸರಣಿಗಳನ್ನೂ ಭಾರತ ಗೆದ್ದುಕೊಂಡಿದೆ.