ಸಾಕಷ್ಟು ವಿಶ್ರಾಂತಿಯ ಬಳಿಕ ರಾಷ್ಟ್ರೀಯ ತಂಡಕ್ಕೆ ಕಮ್'ಬ್ಯಾಕ್ ಮಾಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಅರ್ಧಶತಕ ಬಾರಿಸಿ ಮಿಂಚಿದರು.

ಕೊಲಂಬೊ(ಜು.21): ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭರ್ಜರಿಯಾಗಿಯೇ ಆರಂಭಿಸಿದೆ. ಎರಡು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನವೇ ಭಾರತೀಯ ಸ್ಪಿನ್ನರ್‌'ಗಳು ಮಿಂಚು ಹರಿಸಿದ್ದಾರೆ.

ಇಲ್ಲಿನ ಕೊಲಂಬೊ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಧ್ಯಕ್ಷರ ಇಲೆವೆನ್ ತಂಡ ಭಾರತದ ಸ್ಪಿನ್ ದಾಳಿಗೆ ತತ್ತರಿಸಿತು. ಆರಂಭಿಕ ದನುಷ್ಕಾ ಗುಣತಿಲಕ ಹಾಗೂ ನಾಯಕ ಲಹಿರು ತಿರಿಮನ್ನೆ ಅರ್ಧಶತಕ ಬಾರಿಸಿದ್ದನ್ನು ಹೊರತುಪಡಿಸಿದರೆ, ಉಳಿದ್ಯಾರಿಂದಲೂ ಹೋರಾಟ ಕಂಡುಬರಲಿಲ್ಲ.

ಒಂದು ಹಂತದಲ್ಲಿ 139 ರನ್‌'ಗಳಿಗೆ ಕೇವಲ 1 ವಿಕೆಟ್ ಕಳೆದುಕೊಂಡಿದ್ದ ಅಧ್ಯಕ್ಷರ ಇಲೆವೆನ್ ಕೊನೆ 9 ವಿಕೆಟ್‌'ಗಳನ್ನು ಕೇವಲ 48 ರನ್‌'ಗಳಿಗೆ ಕಳೆದುಕೊಂಡಿತು.

ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಅಂತಿಮವಾಗಿ ಅಧ್ಯಕ್ಷರ ಇಲೆವೆನ್ ತಂಡ 187 ರನ್‌'ಗಳಿಗೆ ಸರ್ವಪತನಗೊಂಡಿತು.

ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ, ಮೊದಲ ಓವರ್‌'ನಲ್ಲೇ ವಿಕೆಟ್ ಕಳೆದುಕೊಂಡಿತು. ಆರಂಭಿಕ ಅಭಿನವ್ ಮುಕುಂದ್ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ಚೇತೇಶ್ವರ್ ಪೂಜಾರ 12 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಸಾಕಷ್ಟು ವಿಶ್ರಾಂತಿಯ ಬಳಿಕ ರಾಷ್ಟ್ರೀಯ ತಂಡಕ್ಕೆ ಕಮ್'ಬ್ಯಾಕ್ ಮಾಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಅರ್ಧಶತಕ ಬಾರಿಸಿ ಮಿಂಚಿದರು. 4ನೇ ವಿಕೆಟ್‌'ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ದಿನದಂತ್ಯದವರೆಗೂ ವಿಕೆಟ್ ಕಾಪಾಡಿಕೊಂಡರು. ಕೊಹ್ಲಿ 34, ರಹಾನೆ 30 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಲಂಕಾ ಅಧ್ಯಕ್ಷರ ಇಲೆವೆನ್ ಮೊದಲ ಇನ್ನಿಂಗ್ಸ್ :187/10

ಗುಣತಿಲಕ 87, ತಿರಿಮನ್ನೆ 59,

ಕುಲ್ದೀಪ್ ಯಾದವ್ 14/4

ಭಾರತ ಮೊದಲ ಇನ್ನಿಂಗ್ಸ್ : 135/3

ರಾಹುಲ್ 54, ಕೊಹ್ಲಿ 34*

ವಿಶ್ವ ಫರ್ನಾಂಡೊ 21/2