Asianet Suvarna News Asianet Suvarna News

ಈ ವರ್ಷ ಕೆಪಿಎಲ್‌ನಲ್ಲಿ ಹೊರ ರಾಜ್ಯದ ಕ್ರಿಕೆಟಿಗರು?

  • ಈ ವರ್ಷ ಕೆಪಿಎಲ್‌ನಲ್ಲಿ ಹೊರ ರಾಜ್ಯದ ಕ್ರಿಕೆಟಿಗರು?
  • ಹೊಸ ಮಾದರಿಯಲ್ಲಿ ಹೊರಬರಲಿದೆ ರಾಜ್ಯದ ಟಿ20 ಲೀಗ್‌
  • ಒಂದು ತಂಡದಲ್ಲಿ 2 ಹೊರಗಿನ ಆಟಗಾರರಿಗೆ ಅವಕಾಶ ಸಾಧ್ಯತೆ
KPL To Have Cricketers From Others State

ಬೆಂಗಳೂರು : ಐಪಿಎಲ್‌ನಲ್ಲಿ ಹೊರ ದೇಶದ ಆಟಗಾರರು ಆಡುವಂತೆ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟಿ20ಯಲ್ಲಿ ಭಾರತದ ಇತರೆ ರಾಜ್ಯದ ಕ್ರಿಕೆಟಿಗರು ಪಾಲ್ಗೊಳ್ಳುವ ದಿನ ಹತ್ತಿರವಾಗಿದೆ. 2018ರ ಆವೃತ್ತಿಯಲ್ಲಿ ಹೊರ ರಾಜ್ಯದ ಆಟಗಾರರಿಗೆ ಅವಕಾಶ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಚಿಂತನೆ ನಡೆಸಿದ್ದು, ಈ ಬಗ್ಗೆ ಕೆಪಿಎಲ್‌ ತಂಡಗಳ ಮಾಲೀಕರೊಂದಿಗೆ ಚರ್ಚಿಸಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಹೊರ ರಾಜ್ಯದ ಆಟಗಾರರನ್ನು ಆಡಿಸುವ ಕುರಿತು ಶನಿವಾರ (ಜುಲೈ 7) ಕೆಎಸ್‌ಸಿಎನಲ್ಲಿ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಈ ಸಂಬಂಧ, ‘ಕನ್ನಡಪ್ರಭ’ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹೊರ ರಾಜ್ಯದ ಆಟಗಾರರನ್ನು ಆಡಿಸುವ ವಿಷಯವನ್ನು ನಿರಾಕರಿಸದೆ ‘ಜು.7ಕ್ಕೆ ಎಲ್ಲವೂ ನಿರ್ಧಾವಾಗುತ್ತದೆ’ ಎಂದರು.

ಒಂದೊಮ್ಮೆ ಹೊರರಾಜ್ಯದ ಆಟಗಾರರಿಗೆ ಅವಕಾಶ ಕಲ್ಪಿಸಿದರೆ, ರಾಜ್ಯ ಕ್ರಿಕೆಟ್‌ ಸಂಸ್ಥೆಯೊಂದು ಅಧಿಕೃತವಾಗಿ ಆಯೋಜಿಸುವ ಲೀಗ್‌ನಲ್ಲಿ ಹೊರ ರಾಜ್ಯದ ಆಟಗಾರರು ಕಾಣಿಸಿಕೊಳ್ಳುವುದು ಇದೇ ಮೊದಲ ಬಾರಿಯಾಗಲಿದೆ.

ಒಂದು ತಂಡದಲ್ಲಿ ಇಬ್ಬರು ಹೊರಗಿನವರು?: ಕೆಪಿಎಲ್‌ನಲ್ಲಿ ಸದ್ಯ 7 ತಂಡಗಳು ಆಡುತ್ತಿವೆ. ಪ್ರತಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಇಬ್ಬರು ಹೊರ ರಾಜ್ಯದ ಆಟಗಾರರಿಗೆ ಸ್ಥಾನ ನೀಡುವ ಬಗ್ಗೆ ಯೋಚನೆ ನಡೆಸಲಾಗಿದೆ. ಭಾರತದಲ್ಲೀಗ ಟಿ20 ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿದ್ದು, ಅನೇಕರು ಟಿ20 ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪೈಕಿ ಕೆಲವರು ಕೆಪಿಎಲ್‌ನಲ್ಲಿ ಆಡಿದರೆ, ಲೀಗ್‌ ಮತ್ತಷ್ಟುಜನಪ್ರಿಯತೆ ಗಿಟ್ಟಿಸಲಿದೆ ಎನ್ನುವ ಲೆಕ್ಕಾಚಾರ ರಾಜ್ಯ ಕ್ರಿಕೆಟ್‌ ಸಂಸ್ಥೆಯದ್ದು ಎನ್ನಲಾಗಿದೆ. ವಿದೇಶಿ ಆಟಗಾರರು ಐಪಿಎಲ್‌ ಕಳೆ ಹೆಚ್ಚಿಸಿದ್ದಾರೆ. ಅನೇಕ ಸ್ಥಳೀಯ ಆಟಗಾರರಿಗೆ, ತಾರಾ ವಿದೇಶಿ ಆಟಗಾರರಿಂದ ಸಲಹೆ, ಮಾರ್ಗದರ್ಶನ ದೊರೆತಿದೆ. ಇದೇ ರೀತಿ, ರಾಜ್ಯದ ಯುವ ಆಟಗಾರರಿಗೂ ಹೊರ ರಾಜ್ಯದ ತಾರಾ ಆಟಗಾರರಿಂದ ಸಲಹೆ ಸಿಕ್ಕರೆ ಅವರ ವೃತ್ತಿಬದುಕಿಗೆ ನೆರವಾಗಲಿದೆ ಎನ್ನುವ ಲೆಕ್ಕಾಚಾರವೂ ಇದೆ.

ಬಿಸಿಸಿಐ ಸಮ್ಮತಿ!: ಕೆಪಿಎಲ್‌ನಲ್ಲಿ ಹೊರ ರಾಜ್ಯದ ಆಟಗಾರರನ್ನು ಆಡಿಸಲು ಬಿಸಿಸಿಐ ಅನುಮತಿ ನೀಡಿದೆ ಎಂದು ಕೆಪಿಎಲ್‌ನ ತಂಡವಾದ ಬಿಜಾಪುರ ಬುಲ್ಸ್‌ನ ಮಾಲೀಕ ಕಿರಣ್‌ ಕಟ್ಟಿಮನಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಕಳೆದ ಬಾರಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಲೀಗ್‌ ಹಂತದ ಪಂದ್ಯಗಳು ನಡೆದಿದ್ದವು. ಹುಬ್ಬಳ್ಳಿಯಲ್ಲಿ ಫೈನಲ್‌ ಪಂದ್ಯ ನಡೆದಿತ್ತು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಹೆಚ್ಚಿನ ಪಂದ್ಯಗಳನ್ನು ನಡೆಸುವ ಉದ್ದೇಶ ಆಯೋಜಕರಿಗೆ ಇದೆ. ಏಕೆಂದರೆ ಬೆಂಗಳೂರಿನ ಕ್ರೀಡಾಂಗಣದಲ್ಲಿ ಮಳೆ ಬಂದರೂ ಸಬ್‌-ಏರ್‌ ವ್ಯವಸ್ಥೆ ಇರುವ ಕಾರಣ ಪಂದ್ಯ ರದ್ದಾಗುವ ಸಾಧ್ಯತೆ ತೀರಾ ಕಡಿಮೆ. ಆದರೆ ಪಂದ್ಯಗಳನ್ನು ಬೆಂಗಳೂರಿಗಿಂತ ಇತರೆಡೆ ನಡೆಸಿದರೆ, ಆಟವನ್ನು ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ದಂತಾಗುತ್ತದೆ ಎಂದು ಕಿರಣ್‌ ಅಭಿಪ್ರಾಯಿಸಿದರು.

ಜುಲೈ 17ಕ್ಕೆ ವೇಳಾಪಟ್ಟಿ: ಕೆಪಿಎಲ್‌ ಈವರೆಗೂ 6 ಆವೃತ್ತಿಗಳನ್ನು ಕಂಡಿದೆ. ಈ ವರ್ಷದ್ದು 7ನೇ ಆವೃತ್ತಿ. ಜುಲೈ 17ರಂದು ಪಂದ್ಯಾವಳಿಯ ವೇಳಾಪಟ್ಟಿಪ್ರಕಟಗೊಳ್ಳಲಿದ್ದು, ಬಹುತೇಕ ಆಗಸ್ಟ್‌ ಮೊದಲ ಇಲ್ಲವೇ 2ನೇ ವಾರದಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದೆ ಎಂದು ಕೆಎಸ್‌ಸಿಎ ಅಧಿಕಾರಿ ತಿಳಿಸಿದರು. ಈ ವರ್ಷ ಫೈನಲ್‌ ಪಂದ್ಯಕ್ಕೆ ಮೈಸೂರು ಆತಿಥ್ಯ ವಹಿಸಲಿದೆ ಎನ್ನಲಾಗಿದೆ.

ಈ ವರ್ಷದಿಂದ ಮಹಿಳಾ ಕೆಪಿಎಲ್‌?

ಮಹಿಳಾ ಐಪಿಎಲ್‌ ಆರಂಭಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿರುವ ಬೆನ್ನಲ್ಲೇ, ಮಹಿಳಾ ಕೆಪಿಎಲ್‌ ಆಯೋಜಿಸಲು ಕೆಎಸ್‌ಸಿಎ ಚಿಂತನೆ ನಡೆಸುತ್ತಿದೆ. ಈ ವರ್ಷವೇ ಮಹಿಳಾ ಟಿ20 ಲೀಗ್‌ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ ಇತರೆ ರಾಜ್ಯಗಳಿಗೆ ಮಾದರಿಯಾಗಲು ಕೆಎಸ್‌ಸಿಎ ಸಿದ್ಧಗೊಳ್ಳುತ್ತಿದೆ. ಕಳೆದ ವರ್ಷ ರಾಜ್ಯ ಕ್ರಿಕೆಟ್‌ ಆಟಗಾರ್ತಿಯರೇ ಸೇರಿ ಮೈಸೂರಿನಲ್ಲಿ ಟಿ20 ಲೀಗ್‌ ಆಯೋಜಿಸಿದ್ದರು. ರಾಜ್ಯದ ಆಟಗಾರ್ತಿರ ಜತೆ ಹೊರರಾಜ್ಯದ ಆಟಗಾರ್ತಿಯರು ಸಹ ಲೀಗ್‌ನಲ್ಲಿ ಆಡಿದ್ದರು. ಯಶಸ್ವಿಯಾಗಿ ನಡೆದಿದ್ದ ಟೂರ್ನಿಗೆ ಕೆಎಸ್‌ಸಿಎ ಬೆಂಬಲ ನೀಡಿತ್ತು. ಈ ಬಾರಿ ಸ್ವತಃ ತಾನೇ ಮಹಿಳಾ ಕೆಪಿಎಲ್‌ ಆಯೋಜಿಸಲು ಕೆಎಸ್‌ಸಿಎ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯ ರಾಜ್ಯ ಆಟಗಾರ್ತಿಯರನ್ನು ಉತ್ಸುಕಗೊಳಿಸಿದೆ. ರಾಜ್ಯದ ಪ್ರಮುಖ ಆಟಗಾರ್ತಿಯೊಬ್ಬರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಮಹಿಳಾ ಕ್ರಿಕೆಟ್‌ನಲ್ಲಿ ಇದೊಂದು ಅತ್ಯುತ್ತಮ ಬೆಳವಣಿಗೆ. ಲೀಗ್‌ ನಡೆದರೆ ರಾಜ್ಯದ ಪ್ರತಿಭೆಗಳಿಗೆ ಮತ್ತಷ್ಟುಅವಕಾಶಗಳು ದೊರೆಯಲಿವೆ. ಕೆಪಿಎಲ್‌ನಲ್ಲಿ ಮಿಂಚಿದ ಆಟಗಾರರು ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದ ಅನೇಕ ಉದಾಹರಣೆಗಳಿವೆ. ಅದೇ ರೀತಿ ಮಹಿಳಾ ಐಪಿಎಲ್‌ ಆರಂಭವಾಗುವ ಹೊತ್ತಿಗೆ, ಮಹಿಳಾ ಕೆಪಿಎಲ್‌ ಪ್ರತಿಭಾನ್ವೇಷಣೆ ನಡೆಸಿದರೆ ಸಂತಸವಾಗಲಿದೆ’ ಎಂದರು.

ವರದಿ: ಧನಂಜಯ ಎಸ್‌. ಹಕಾರಿ

Follow Us:
Download App:
  • android
  • ios