Asianet Suvarna News Asianet Suvarna News

KPL 2019: ಸ್ಟಾಲಿನ್ ಹೋವರ್ ಶತಕ, ಬೆಳಗಾವಿ ಪ್ಯಾಂಥರ್ಸ್’ಗೆ ಸುಲಭ ಜಯ

8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಮೈಸೂರು ಚರಣದ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಶಿವಮೊಗ್ಗ ಲಯನ್ಸ್ ಎದುರು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

KPL 2019 Stallin Hoover unbeaten Century Belagavi Panthers to comprehensive win against Shivamogga Lions
Author
Mysore, First Published Aug 25, 2019, 7:44 PM IST

ಮೈಸೂರು[ಆ.25]: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಮೈಸೂರು ಆವೃತ್ತಿಯ ಮೊದಲ ಪಂದ್ಯದಲ್ಲಿ ಅಕ್ಷರಶಃ ರನ್ ಮಳೆಯೇ ಹರಿದಿದೆ. ಶಿವಮೊಗ್ಗ ಲಯನ್ಸ್ ನೀಡಿದ್ದ 176 ರನ್’ಗಳ ಗುರಿಯನ್ನು ಬೆಳಗಾವಿ ಪ್ಯಾಂಥರ್ಸ್ ತಂಡ ಇನ್ನೂ 31 ಎಸೆತಗಳು ಬಾಕಿ ಇರುವಂತೆ 9 ವಿಕೆಟ್’ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಪ್ಯಾಂಥರ್ಸ್ ತಂಡದ ಆರಂಭಿಕ ಬ್ಯಾಟ್ಸ್’ಮನ್ ಸ್ಟಾಲಿನ್ ಹೋವರ್ ಅಜೇಯ ಶತಕ ಹಾಗೂ ನಾಯಕ ಮನೀಶ್ ಪಾಂಡೆ ಆಕರ್ಷಕ ಅರ್ಧಶತಕದ ನೆರವಿನಿಂದ ಸುಲಭವಾಗಿ ಜಯ ದಾಖಲಿಸಿತು.

ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಬೆಳಗಾವಿ ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗ ತಂಡವನ್ನು 175 ರನ್’ಗಳಿಗೆ ನಿಯಂತ್ರಿಸಿದ ಬೆಳಗಾವಿ ಬ್ಯಾಟಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರಿತು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಬೆಳಗಾವಿ ಸ್ಫೋಟಕ ಆರಂಭ ಪಡೆಯಿತು. ಮೊದಲ 4 ಓವರ್ ಅಂತ್ಯಕ್ಕೆ 11ರ ಸರಾಸರಿಯಂತೆ 44 ರನ್ ಚಚ್ಚಿತು. ಆರ್. ಸಮರ್ಥ್ 12 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 14 ರನ್ ಬಾರಿಸಿ ಪೃಥ್ವಿರಾಜ್ ಶೇಖಾವತ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಸ್ಟಾಲಿನ್ ಜತೆ ಕೂಡಿಕೊಂಡ ನಾಯಕ ಮನೀಶ್ ಪಾಂಡೆ ಶಿವಮೊಗ್ಗ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಎರಡನೇ ವಿಕೆಟ್’ಗೆ  ಮುರಿಯದ 136 ರನ್’ಗಳ ಜತೆಯಾಟವಾಡುವ ಮೂಲಕ ಬೆಳಗಾವಿಗೆ ಸುಲಭ ಗೆಲುವು ತಂದಿತ್ತರು. ಸ್ಟಾಲಿನ್ ಹೋವರ್ 50 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 108 ರನ್ ಬಾರಿಸಿದರೆ, ಮನೀಶ್ ಪಾಂಡೆ ಕೇವಲ 26 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

KPL 2019: 39 ಎಸೆತದಲ್ಲಿ ಶತಕ, ಗೌತಮ್ ಅಬ್ಬರಕ್ಕೆ ದಾಖಲೆ ಪುಡಿ ಪುಡಿ!

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡಕ್ಕೆ ಅವಿನಾಶ್ ಡಿ ಆರಂಭಿಕ ಆಘಾತ ನೀಡಿದರು. ನಿಹಾಲ್ ಉಲ್ಲಾಳ್[4] ವಿಕೆಟ್ ಪಡೆಯುವಲ್ಲಿ ಸಫಲರಾದರು. ಕೆಲಕಾಲ ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕ ವಿಥುನ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಅರ್ಜುನ್ ಹೊಯ್ಸಳ[77] ಹಾಗೂ ಪವನ್ ದೇಶ್’ಪಾಂಡೆ[59] ಆಕರ್ಷಕ ಅರ್ಧಶತಕಗಳ ನೆರವಿನಿಂದ ತಂಡ ಸ್ಫರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಅರ್ಜುನ್ 58 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ನೆರವಿನಿಂದ 77 ರನ್ ಬಾರಿಸಿ ಅವಿನಾಶ್’ಗೆ ಎರಡನೇ ಬಲಿಯಾದರೆ, ಪವನ್ ದೇಶ್’ಪಾಂಡೆ 35 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 59 ಬಾರಿಸಿದರು. ಪವನ್ ವಿಕೆಟ್ ಪಡೆಯುವಲ್ಲೂ ಅವಿನಾಶ್ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:
ಶಿವಮೊಗ್ಗ ಲಯನ್ಸ್: 175/4
ಅರ್ಜುನ್ ಹೊಯ್ಸಳ: 77
ಅವಿನಾಶ್ ಡಿ: 32/3
ಬೆಳಗಾವಿ ಪ್ಯಾಂಥರ್ಸ್: 180/1
ಸ್ಟಾಲಿನ್ ಹೋವರ್: 108*
ಪೃಥ್ವಿರಾಜ್ ಶೇಖಾವತ್: 46/1

Follow Us:
Download App:
  • android
  • ios