ಮುಂದಿನ 10 ದಿನಗಳ ಕಾಲ ಸೆಮಿಫೈನಲ್, ಫೈನಲ್ ಸೇರಿದಂತೆ 10 ಪಂದ್ಯಗಳು ಇಲ್ಲಿ ನಡೆಯಲಿವೆ. ಈ ಹಿಂದೆಯೂ ಹುಬ್ಬಳ್ಳಿ ಕೆಪಿಎಲ್ ಹಾಗೂ ಕೆಲ ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು.
ಹುಬ್ಬಳ್ಳಿ(ಸೆ.14): ಬೆಂಗಳೂರು ಹಾಗೂ ಮೈಸೂರಿನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡ ಬಳಿಕ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಹುಬ್ಬಳ್ಳಿಗೆ ಕಾಲಿಟ್ಟಿದೆ.
ಇಂದಿನಿಂದ ಈ ಆವೃತ್ತಿಯ ಕೊನೆಚರಣ ಇಲ್ಲಿನ ಕೆಎಸ್'ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಬುಧವಾರ ಕೆಎಸ್‌ಸಿಎ ಅಧ್ಯಕ್ಷ ಸಂಜಯ್ ದೇಸಾಯಿ ಹುಬ್ಬಳ್ಳಿ ಚರಣಕ್ಕೆ ಅಧಿಕೃತ ಚಾಲನೆ ನೀಡಿದರು. ಅಲ್ಲದೇ ಕೆಪಿಎಲ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ಮುಂದಿನ 10 ದಿನಗಳ ಕಾಲ ಸೆಮಿಫೈನಲ್, ಫೈನಲ್ ಸೇರಿದಂತೆ 10 ಪಂದ್ಯಗಳು ಇಲ್ಲಿ ನಡೆಯಲಿವೆ. ಈ ಹಿಂದೆಯೂ ಹುಬ್ಬಳ್ಳಿ ಕೆಪಿಎಲ್ ಹಾಗೂ ಕೆಲ ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು.
‘ಮೈಸೂರು ಚರಣ ಭಾರೀ ಯಶಸ್ಸು ಕಂಡಿತು. ಪ್ರೇಕ್ಷಕರಿಗೆ ಉತ್ಕೃಷ್ಟ ಮಟ್ಟದ ಕ್ರಿಕೆಟ್ ವೀಕ್ಷಿಸುವ ಅವಕಾಶ ದೊರೆಯಿತು. ಬಹುತೇಕ ಪಂದ್ಯಗಳು ಕೊನೆವರೆಗೂ ರೋಚಕತೆ ಉಳಿಸಿಕೊಂಡಿದ್ದವು. ಅದೇ ರೀತಿಯ ರೋಚಕ ಪಂದ್ಯಗಳನ್ನು ಹುಬ್ಬಳ್ಳಿ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆ ಮಾಡಬಹುದಾಗಿದೆ’ ಎಂದು ಸಂಜಯ್ ದೇಸಾಯಿ ಹೇಳಿದರು.
ಇಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ತವರು ತಂಡ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್ ವಿರುದ್ಧ ಗುರುವಾರ ಸಂಜೆ ಸೆಣಸಾಡಲಿದೆ. ಕಳೆದ ವಾರದಿಂದಲೇ ಪಂದ್ಯಗಳ ಟಿಕೆಟ್ ಮಾರಾಟ ಆರಂಭಗೊಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಕೆಎಸ್'ಸಿಎ ತಿಳಿಸಿದೆ.
