ಡೇಲ್ ಸ್ಟೇನ್ ವಿದಾಯಕ್ಕೆ ಅತ್ಯದ್ಭುತವಾಗಿ ಶುಭಕೋರಿದ ABD&ಕೊಹ್ಲಿ
ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಸಹಪಾಠಿಗಳಾದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಆ.06]: ದಕ್ಷಿಣ ಆಫ್ರಿಕಾ ತಂಡದ ಅನುಭವಿ ವೇಗಿ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಗಾಯದ ಸಮಸ್ಯೆಯಿಂದ ತಂಡದೊಳಗೆ ಹಾಗೂ ಹೊರಗೆ ಹೋಗುತ್ತಿದ್ದ ಸ್ಪೀಡ್ ಗನ್ ಸ್ಟೇನ್, ಸೀಮಿತ ಓವರ್’ಗಳತ್ತ ಗಮನ ಹರಿಸುವ ಉದ್ದೇಶದಿಂದ ಸಾಂಪ್ರದಾಯಿಕ ಮಾದರಿಯ ಕ್ರಿಕೆಟ್’ಗೆ ಸೋಮವಾರ ವಿದಾಯ ಘೋಷಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ಡೇಲ್ ಸ್ಟೇನ್ ದಿಢೀರ್ ವಿದಾಯ!
12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಎರಡು ಪಂದ್ಯಗಳನ್ನಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿಯೇ ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ 2019ರ ವಿಶ್ವಕಪ್ ಟೂರ್ನಿಗೆ ಹರಿಣಗಳ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ, ಗಾಯದಿಂದ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ತಂಡದಿಂದ ಡೇಲ್ ಸ್ಟೇನ್ ಅವರನ್ನು ಕೈಬಿಡಲಾಗಿತ್ತು.
ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಟೀಂ ಇಂಡಿಯಾ ಹಾಗೂ RCB ನಾಯಕ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ. ’ಡೇಲ್ ಸ್ಟೇನ್ ಕ್ರಿಕೆಟ್’ನ ನಿಜವಾದ ಚಾಂಪಿಯನ್. ವೇಗದ ಮಶೀನ್’ಗೆ ನಿವೃತ್ತಿಯ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಕ್ರಿಕೆಟಿಗ ಎಂದೇ ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡಾ ಸಹಪಾಠಿ ಕ್ರಿಕೆಟಿಗನಿಗೆ ವಿದಾಯದ ಶುಭ ಕೋರಿದ್ದಾರೆ. ಹೇಳಿಕೊಳ್ಳಲು ಸಾಕಷ್ಟು ಸವಿನೆನಪುಗಳಿವೆ. ತುಂಬಾ ವರ್ಷಗಳ ಹಿಂದೆ ಒಟ್ಟಿಗೆ ಆಡಲಾರಂಭಿಸಿದೆವು. ದಿನ ಕಳೆದಂತೆ ನೀವೊಬ್ಬ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದನ್ನು ಮುಂದಿನ ಸೀಟ್’ನಲ್ಲಿ ಕುಳಿತು ನೋಡುವ ಅದೃಷ್ಠ ನನ್ನದಾಯಿತು. ಎಂದೆಂದಿಗೂ ನೀವೊಬ್ಬ ಶ್ರೇಷ್ಠ ಬೌಲರ್ ಎಂದು ಎಬಿ ಡಿವಿಲಿಯರ್ಸ್ ಇನ್’ಸ್ಟಾಗ್ರಾಂನಲ್ಲಿ ಡೇಲ್ ಸ್ಟೇನ್ ಅವರನ್ನು ಕೊಂಡಾಡಿದ್ದಾರೆ.