ವಿಶ್ವಕಪ್‌ ತಯಾರಿಯ ಗುಟ್ಟು ಬಿಟ್ಟು ಕೊಟ್ಟ ಕೊಹ್ಲಿ; ರಾಹುಲ್‌ಗೆ 3ನೇ ಕ್ರಮಾಂಕ?

KL Rahul To Likely To Play in 3 Order in  World Cup
Highlights

  • ವಿಶ್ವಕಪ್‌ನಲ್ಲಿ ರಾಹುಲ್‌ಗೆ 3ನೇ ಕ್ರಮಾಂಕ?
  • ಪ್ರಯೋಗ - ರಾಹುಲ್‌ಗೆ 3ನೇ ಕ್ರಮಾಂಕ ಬಿಟ್ಟುಕೊಟ್ಟು 4ನೇ ಕ್ರಮಾಂಕ್ಕೆ ಜಾರಿದ ಕೊಹ್ಲಿ
  • 2019ರ ಏಕದಿನ ವಿಶ್ವಕಪ್‌ಗೆ ತಯಾರಿ

ಮ್ಯಾಂಚೆಸ್ಟರ್‌: 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಭಾರತ ತಂಡ ತಯಾರಿ ಆರಂಭಿಸಿದೆ. ವಿಶ್ವಕಪ್‌ ಇಂಗ್ಲೆಂಡ್‌ನಲ್ಲೇ ನಡೆಯಲಿರುವುದರಿಂದ, ಸದ್ಯದ ಇಂಗ್ಲೆಂಡ್‌ ಪ್ರವಾಸವನ್ನು ಟೀಂ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ. ಮಂಗಳವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಆಡಳಿತ ವಿಭಿನ್ನ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಯಿತು. ಸಾಮಾನ್ಯವಾಗಿ ಸೀಮಿತ ಓವರ್‌ ಮಾದರಿಯಲ್ಲಿ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಾರೆ. ಅದರಲ್ಲೂ ತಂಡ ಆರಂಭಿಕ ಆಘಾತ ಎದುರಿಸಿದ ಬಳಿಕ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಆದರೆ ಕೆ.ಎಲ್‌.ರಾಹುಲ್‌ರನ್ನು ತಂಡ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತು. ಕೊಹ್ಲಿ 4ನೇ ಕ್ರಮಾಂಕಕ್ಕೆ ಜಾರಿದರು.

ಈ ಪ್ರಯೋಗದ ಕುರಿತು ಪಂದ್ಯ ಮುಕ್ತಾಯಗೊಂಡ ಬಳಿಕ ಮಾತನಾಡಿದ ವಿರಾಟ್‌, ‘ನಾನು ಒಂದು ಕ್ರಮಾಂಕ ಕೆಳಗಿಳಿದಿದ್ದೇನೆ ಅಷ್ಟೇ. ಮಧ್ಯಮ ಕ್ರಮಾಂಕದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಇದು ನೆರವಾಗಲಿದೆ. ಕೆಳ ಕ್ರಮಾಂಕದಲ್ಲಿ ಅನುಭವಿ ಆಟಗಾರರಿದ್ದಾರೆ. ಹೀಗಾಗಿ, 3ನೇ ಕ್ರಮಾಂಕದಲ್ಲಿ ರಾಹುಲ್‌ ಆಡಿದರೆ ಸೂಕ್ತ ಎನಿಸಿತು. ಯುವ ಹಾಗೂ ಒತ್ತಡ ನಿಭಾಯಿಸಬಲ್ಲ ಆಟಗಾರರಿಗೆ ಮೇಲ್ಕ್ರಮಾಂಕದಲ್ಲಿ ಅವಕಾಶ ನೀಡುವ ಅಗತ್ಯವಿದೆ. ರಾಹುಲ್‌ ತಾವು ಇಂಗ್ಲೆಂಡ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದರು. ‘ನಾವು ಒಂದೇ ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಿಲ್ಲ. ಇರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಬೇಕಿದೆ ’ ಎಂದು ಕೊಹ್ಲಿ ವಿಶ್ವಕಪ್‌ ತಯಾರಿಯ ಗುಟ್ಟು ಬಿಟ್ಟುಕೊಟ್ಟರು.

2017ರ ಜನವರಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಕೊಹ್ಲಿ, ಎದುರಾಳಿಯಲ್ಲಿ ನಡುಕ ಹುಟ್ಟಿಸಬಲ್ಲ, ಹೆಚ್ಚು ಒತ್ತಡ ಹೇರಬಲ್ಲ ಆಟಗಾರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೊಹ್ಲಿಯ ನೆಚ್ಚಿನ ಆಟಗಾರರ ಪೈಕಿ ರಾಹುಲ್‌ ಪ್ರಮುಖರಾಗಿದ್ದು, ತಂಡದಲ್ಲಿ ಹೆಚ್ಚಿನ ಅವಕಾಶಕ್ಕೆ ಅರ್ಹರು ಎಂದು ಹಲವು ಬಾರಿ ಹೇಳಿದ್ದಾರೆ. ಮೊದಲ ಟಿ20ಯ ಶತಕವನ್ನು ಕೊಹ್ಲಿ ‘ನಂಬಲು ಅಸಾಧ್ಯ. ಅತ್ಯಂತ ಸೊಗಸಾದ ಆಟ’ ಎಂದು ಬಣ್ಣಿಸಿದರು. ಒಂದೊಮ್ಮೆ ರಾಹುಲ್‌ ಏಕದಿನ ತಂಡದಲ್ಲಿ ಕಾಯಂ ಸ್ಥಾನ ಗಿಟ್ಟಿಸಿದರೆ, ವಿಶ್ವಕಪ್‌ ತಂಡದಲ್ಲಿ ಸುರೇಶ್‌ ರೈನಾ ಇಲ್ಲವೇ ಮನೀಶ್‌ ಪಾಂಡೆ ತಮ್ಮ ಸ್ಥಾನ ಕಳೆದುಕೊಳ್ಳಬೇಕಿದೆ.

loader