ನವದೆಹಲಿ(ನ.15): ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಚೇತರಿಸಿಕೊಂಡ ಹಿನ್ನಲೆಯಲ್ಲಿ ತಂಡ ಸೇರಿಕೊಳ್ಳಲು ಬಿಸಿಸಿಐನಿಂದ ಬುಲಾವ್ ಬಂದಿದೆ.

ನವೆಂಬರ್ 17ರಿಂದ ವಿಶಾಖಪಟ್ಟನಂನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್ ರಾಹುಲ್ ತಂಡವನ್ನು ಸೇರ್ಪಡೆ ಮಾಡಿಕೊಳ್ಳಲು ಹಿರಿಯರ ಆಯ್ಕೆ ಸಮಿತಿಯು ತೀರ್ಮಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.

ಸಧ್ಯ ರಾಹುಲ್ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದು, ರಾಜಸ್ಥಾನದ ವಿರುದ್ಧ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್'ನಲ್ಲಿ 76 ಹಾಗೂ 106 ರನ್'ಗಳಿಸಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಂಪೂರ್ಣ ಫಿಟ್ ಆಗಿರುವುದಾಗಿ ನಿರೂಪಿಸಿದ್ದಾರೆ. ರಾಹುಲ್ ತಂಡಕ್ಕೆ ವಾಪಾಸಾತಿಯಿಂದ ಹಿರಿಯ ಆಟಗಾರ ಗೌತಮ್ ಗಂಭೀರ್ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ.

ರಾಜ್'ಕೋಟ್'ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದೆಹಲಿಯ ಆಟಗಾರ ಗಂಭೀರ್ ಕೇವಲ 29 ಹಾಗೂ 0 ಗಳಿಸಲಷ್ಟೇ ಶಕ್ತರಾಗಿದ್ದರು.