ಜಕಾರ್ತ(ಅ.13): ಕೆಲ ತಿಂಗಳುಗಳ ಹಿಂದಷ್ಟೇ ಚೆಸ್‌ ಕ್ರೀಡೆಗೆ ವಿದಾಯ ಹೇಳುವ ಹೊಸ್ತಿಲಲ್ಲಿದ್ದ ಕರ್ನಾಟಕದ ಕಿಶನ್‌ ಗಂಗೊಳ್ಳಿ, ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶುಕ್ರವಾರ ಪುರುಷರ ಬಿ2/ಬಿ3 ವಿಭಾಗದ ರಾರ‍ಯಪಿಡ್‌ ಚೆಸ್‌ನಲ್ಲಿ ಕಿಶನ್‌ ಇರಾನ್‌ನ ಮಜಿದ್‌ ಬಗೇರಿಯನ್ನು ಸೋಲಿಸಿ ಸ್ವರ್ಣ ಪದಕ ಗೆದ್ದುಕೊಂಡರು.

ಭಾಗಶಃ ಅಂಧ ಪಟುಗಳು ಬಿ2/ಬಿ3 ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಕಿಶನ್‌ 4 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದಾರೆ.  2017ರ ಏಷ್ಯನ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಕಿಶನ್‌, 2012ರ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನ ಜಯಿಸಿದ್ದರು. 2017ರಲ್ಲಿ ಮೆಸಡೋನಿಯಾದಲ್ಲಿ ನಡೆದ ಚೆಸ್‌ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕಕ್ಕೆ ಕಿಶನ್‌ ಕೊರಳೊಡ್ಡಿದ್ದರು. 19ನೇ ವಯಸ್ಸಿನಲ್ಲಿ ವೃತ್ತಿಪರ ಚೆಸ್‌ ಪಟುವಾದ ಕಿಶನ್‌, ಕುವೆಂಪು ವಿಶ್ವವಿದ್ಯಾಲಯದಿಂದ ಎಂಎ (ಅರ್ಥಶಾಸ್ತ್ರ) ಪದವಿ ಪಡೆದಿದ್ದಾರೆ. ಪ್ಯಾರಾ ಚೆಸ್‌ಗೆ ಹೆಚ್ಚಿನ ಮನ್ನಣೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಕಿಶನ್‌ ಕ್ರೀಡೆಯನ್ನು ತೊರೆಯಲು ನಿರ್ಧರಿಸಿದ್ದರು. ಆದರೆ ಪ್ಯಾರಾ ಏಷ್ಯಾಡ್‌ನಲ್ಲಿ ಚಿನ್ನ ಜಯಿಸುವ ಮೂಲಕ, ಕಿಶನ್‌ ಸರ್ಕಾರದ ಗಮನ ಸೆಳೆಯುವ ಯತ್ನ ನಡೆಸಿದ್ದಾರೆ.

ಇದೇ ವೇಳೆ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಶುಕ್ರವಾರ 4 ಚಿನ್ನ ಸೇರಿ ಭಾರತ ಒಟ್ಟು 9 ಪದಕ ಗಳಿಸಿತು. ಮಹಿಳೆಯರ ಪಿ1 ವಿಭಾಗದ ರಾರ‍ಯಪಿಡ್‌ ಚೆಸ್‌ ಸ್ಪರ್ಧೆಯಲ್ಲಿ ಕೆ.ಜೆನ್ನಿತಾ ಆ್ಯಂಟೋ ಚಿನ್ನದ ಪದಕ ಗೆದ್ದರು. ಅಂತಿಮ ಸುತ್ತಿನಲ್ಲಿ ಇಂಡೋನೇಷ್ಯಾದ ಮನುರುಂಗ್‌ ರೊಸ್ಲಿಂಡಾ ವಿರುದ್ಧ 1-0 ಅಂತರದಲ್ಲಿ ಜಯಿಸಿದರು.

ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಪಾರುಲ್‌ ಪರ್ಮಾರ್‌ ಮಹಿಳಾ ಸಿಂಗಲ್ಸ್‌ ಎಸ್‌ಎಲ್‌ 3 ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಥಾಯ್ಲೆಂಡ್‌ನ ವಾಂಡೀ ಕಾಮ್ಟಮ್‌ ವಿರುದ್ಧ 21-9, 21-5ರ ಸುಲಭ ಗೆಲುವು ದಾಖಲಿಸಿದರು. ಇದೇ ವಿಭಾಗದಲ್ಲಿ ಮಾನಸಿ ಜೋಶಿ ಕಂಚಿಗೆ ಮುತ್ತಿಟ್ಟರು. ಇನ್ನು ಪುರುಷರ ಎಫ್‌55 ವಿಭಾಗದ ಜಾವೆಲಿನ್‌ ಥ್ರೋನಲ್ಲಿ ನೀರಜ್‌ ಯಾದವ್‌ ಸ್ವರ್ಣ ಪದಕ ಗೆದ್ದರೆ, ಅಮಿತ್‌ ಬಲಿಯಾನ್‌ ಬೆಳ್ಳಿ ಜಯಿಸಿದರು.

ಪುರುಷರ ಎಸ್‌10 ವಿಭಾಗದ 100 ಮೀ. ಬ್ಯಾಕ್‌ಸ್ಟೊ್ರೕಕ್‌ ಈಜು ಸ್ಪರ್ಧೆಯಲ್ಲಿ ಸ್ವಪ್ನಿಲ್‌ ಪಾಟೀಲ್‌ ಬೆಳ್ಳಿ ಗೆದ್ದರೆ, ಪುರುಷರ ಸಿ4 4 ಕಿ.ಮೀ ಪಸ್ರ್ಯೂಟ್‌ ಸೈಕ್ಲಿಂಗ್‌ನಲ್ಲಿ ಗುರ್‌ಲಾಲ್‌ ಸಿಂಗ್‌ ಕಂಚು ಗೆದ್ದರು. ಪ್ಯಾರಾ ಏಷ್ಯಾಡ್‌ ಸೈಕ್ಲಿಂಗ್‌ನಲ್ಲಿ ಭಾರತಕ್ಕಿದು ಚೊಚ್ಚಲ ಪದಕ ಎನ್ನುವುದು ವಿಶೇಷ.

ಮಹಿಳೆಯರ ಎಫ್‌ 51/52/53ಎಸ್‌ ವಿಭಾಗದ ಡಿಸ್ಕಸ್‌ ಥ್ರೋನಲ್ಲಿ ರಿಯೋ ಪ್ಯಾರಾಲಿಂಪಿಕ್‌ ಪದಕ ವಿಜೇತೆ ದೀಪಾ ಮಲಿಕ್‌ ಕಂಚು ಗೆದ್ದರು. ಈ ಕೂಟದಲ್ಲಿ ಇದು ಅವರ 2ನೇ ಪದಕ. ಈ ಮೊದಲು ಎಫ್‌ 53/54 ವಿಭಾಗದ ಜಾವೆಲಿನ್‌ ಥ್ರೋನಲ್ಲಿ ಕಂಚು ಜಯಿಸಿದ್ದರು. ಮಹಿಳೆಯರ ಎಫ್‌11 ವಿಭಾಗದ ಡಿಸ್ಕಸ್‌ ಥ್ರೋನಲ್ಲಿ ನಿಧಿ ಮಿಶ್ರಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಶನಿವಾರ ಕ್ರೀಡಾಕೂಟ ಮುಕ್ತಾಯಗೊಳ್ಳಲಿದ್ದು, ಭಾರತ ಸದ್ಯ 12 ಚಿನ್ನ, 19 ಬೆಳ್ಳಿ, 30 ಕಂಚಿನೊಂದಿಗೆ ಒಟ್ಟು 61 ಪದಕಗಳನ್ನು ಗೆದ್ದು 9ನೇ ಸ್ಥಾನದಲ್ಲಿದೆ.