* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ದತೆ* ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ಕ್ರೀಡಾಕೂಟಕ್ಕೆ ಚಾಲನೆ* ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ
ಬೆಂಗಳೂರು(ಏ.12): 2ನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022ಗೆ (Khelo India University Games 2022) ಭರದ ಸಿದ್ಧತೆ ಆರಂಭಗೊಂಡಿದ್ದು, ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಭಾನುವಾರ ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಗೇಮ್ಸ್‌ಗೆ ಕೇಂದ್ರ ಸರ್ಕಾರ 35 ಕೋಟಿ ರು. ಅನುದಾನ ನೀಡಿದ್ದು, ಒಟ್ಟಾರೆ 52 ಕೋಟಿ ರು.ಗೂ ವೆಚ್ಚದಲ್ಲಿ ಆಯೋಜಿಸುತ್ತಿದ್ದೇವೆ. ಕೇಂದ್ರ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್), ಜೈನ್ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಗೇಮ್ಸ್ ನಡೆಯಲಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ. ಮೇ 3ಕ್ಕೆ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ ಎಂದರು.
ಬಳಿಕ ಮಾತನಾಡಿದ ಕೇಂದ್ರ ಕ್ರೀಡಾ ಇಲಾಖೆಯ ಕಾರ‍್ಯದರ್ಶಿ ಸುಜಾತಾ ಚತುರ್ವೇದಿ, ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, 4,529 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಹೊಸದಾಗಿ ಯೋಗ ಮತ್ತು ಮಲ್ಲಕಂಬವನ್ನು (Mallakhamba and yogasana) ಸೇರಿಸಲಾಗಿದ್ದು, ಒಟ್ಟು 20 ಸ್ಪರ್ಧೆಗಳು ನಡೆಯಲಿವೆ. ಒಟ್ಟು 275 ಚಿನ್ನದ ಪದಕಗಳನ್ನು ಗೆಲ್ಲಬಹುದಾಗಿದೆ. ಕನಕಪುರ ರಸ್ತೆಯಲ್ಲಿರುವ ಜೈನ್ ವಿವಿ, ಗ್ಲೋಬಲ್ ಕ್ಯಾಂಪಸ್, ಜೈನ್ಸ್ ಸ್ಪೋರ್ಟ್ಸ್ ಸ್ಕೂಲ್, ನೇತಾಜಿ ಸುಭಾಶ್ ಚಂದ್ರಬೋಸ್ ಶೂಟಿಂಗ್ ರೇಂಜ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿವೆ. ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸುತ್ತೇವೆ. ಪರಿಸರದ ಬಗ್ಗೆ ಅರಿವು ಮೂಡಿಸಲು ಗೇಮ್ಸ್‌ನ್ನು ‘ಹಸಿರು ಕ್ರೀಡಾಕೂಟ’ ಎಂದು ಘೋಷಿಸಲಾಗಿದ್ದು, ಇದು ಪ್ಲಾಸ್ಟಿಕ್ ಮುಕ್ತ ಕ್ರೀಡಾಕೂಟವಾಗಿರುತ್ತದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಾಯ್ ನಿರ್ದೇಶಕ ಸಂದೀಪ್ ಪ್ರಧಾನ್, ಕಾರ‍್ಯದರ್ಶಿ ರೋಹಿತ್ ಭಾರದ್ವಾಜ್, ಕ್ರೀಡಾ ಇಲಾಖೆ ಆಯುಕ್ತ ಡಾ.ಗೋಪಾಲಕೃಷ್ಣ ಸೇರಿದಂತೆ ಹಲವರಿದ್ದರು.
ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್: ಕಂಚಿಗಾಗಿ ಇಂದು ಭಾರತ-ಇಂಗ್ಲೆಂಡ್ ಫೈಟ್
ಜೈನ್ ವಿವಿ ಸಹಯೋಗ
ಜೈನ್ ವಿಶ್ವವಿದ್ಯಾಲಯದ (Jain University) ಸಹಯೋಗದೊಂದಿಗೆ ನಡೆಯುವ ಗೇಮ್ಸ್‌ಗೆ ಏಪ್ರಿಲ್ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ. ಉದ್ಘಾಟನಾ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬಹುತೇಕ ಸ್ಪರ್ಧೆಗಳು ಜೈನ್ ವಿವಿ ಆವರಣದಲ್ಲಿ ನಡೆಯಲಿವೆ. ಮೊದಲ ಆವೃತ್ತಿಯ ವಿವಿ ಗೇಮ್ಸ್‌ನಲ್ಲಿ ಪಂಜಾಬ್ ವಿವಿ ಮೊದಲ ಸ್ಥಾನ ಪಡೆದಿದ್ದರೆ, ರಾಜ್ಯದ ಮಂಗಳೂರು ವಿವಿ 25 ಪದಕದೊಂದಿಗೆ 5ನೇ ಸ್ಥಾನ ಗಳಿಸಿತ್ತು.
ರಾಷ್ಟ್ರೀಯ ಪುರುಷರ ಹಾಕಿ: ಕ್ವಾರ್ಟರ್‌ಗೆ ಕರ್ನಾಟಕ
ಭೋಪಾಲ್: 12ನೇ ಆವೃತ್ತಿಯ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ರಾಜ್ಯ ತಂಡ ಆಂಧ್ರ ಪ್ರದೇಶ ವಿರುದ್ಧ 14-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯಗಳಿಸಿತು. ಆರಂಭದಿಂದಲೇ ಆಂಧ್ರದ ಮೇಲೆ ಸವಾರಿ ಮಾಡಿದ ರಾಜ್ಯ ತಂಡ ಸತತ ಗೋಲು ಗಳಿಸುತ್ತಲೇ ಸಾಗಿತು. ಯತೀಶ್ ಕುಮಾರ್ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಸೋಮಣ್ಣ 4, ಮೇದಪ್ಪ 3 ಗೋಲು ಬಾರಿಸಿದರು. ಹರೀಶ್ 2, ನಾಚಪ್ಪ, ಸೂರ್ಯ, ಶಮಂತ್ ಹಾಗೂ ಪ್ರಣಾಮ್ ತಲಾ 1 ಗೋಲು ದಾಖಲಿಸಿದರು.
