ನವದೆಹಲಿ[ಆ.18]: ರಿಯೋ ಪ್ಯಾರಾಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ದೀಪಾ ಮಲಿಕ್‌, ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಕುಸ್ತಿಪಟು ಭಜರಂಗ್‌ ಪೂನಿಯಾ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ ಗಾಂಧಿ ಖೇಲ್‌ ರತ್ನಕ್ಕೆ ಆಯ್ಕೆಯಾಗಿದ್ದಾರೆ.

ಶನಿವಾರ ನಿವೃತ್ತ ನ್ಯಾಯಮೂರ್ತಿ ಮುಕುಂದಮ್‌ ಶರ್ಮಾ ಅವರ ನೇತೃತ್ವದ 12 ಸದಸ್ಯರ ಪ್ರಶಸ್ತಿ ಆಯ್ಕೆ ಸಮಿತಿ, ವಾರ್ಷಿಕ ಪ್ರಶಸ್ತಿಗೆ ಕ್ರೀಡಾಪಟುಗಳ ಹೆಸರುಗಳನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿತು. ಸಮಿತಿಯಲ್ಲಿ ಮಾಜಿ ಫುಟ್ಬಾಲಿಗ ಬೈಚುಂಗ್‌ ಭುಟಿಯಾ, ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್, 6 ಬಾರಿ ವಿಶ್ವ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಇದ್ದರು. ಆ.29ಕ್ಕೆ ರಾಷ್ಟ್ರೀಯ ಕ್ರೀಡಾ ದಿನದಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಭಜ್ಜಿಗಿಲ್ಲ ಖೇಲ್‌ ರತ್ನ: ಪಂಜಾಬ್‌ ಸರ್ಕಾರ ತನಿಖೆಗೆ ಆದೇಶ

48 ವರ್ಷದ ದೀಪಾ, 2016ರ ರಿಯೋ ಒಲಿಂಪಿಕ್ಸ್‌ನ ಎಫ್‌ 53 ವಿಭಾಗದ ಶಾಟ್‌ ಪುಟ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಕಳೆದ ವರ್ಷ ಜಾವೆಲಿನ್‌ ಹಾಗೂ ಡಿಸ್ಕಸ್‌ ಥ್ರೋನತ್ತ ಆಕರ್ಷಿತರಾಗಿದ್ದ ಅವರು ಏಷ್ಯನ್‌ ಪ್ಯಾರಾ ಗೇಮ್ಸ್‌ನ ಡಿಸ್ಕಸ್‌ ಥ್ರೋ (ಎಫ್‌ 51-52-53), ಜಾವೆಲಿನ್‌ ಥ್ರೋ (ಎಫ್‌ 53-54) ಸ್ಪರ್ಧೆಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಇದರೊಂದಿಗೆ ಸತತ 3 ಏಷ್ಯನ್‌ ಪ್ಯಾರಾ ಗೇಮ್ಸ್‌ (2010, 2014, 2018)ಗಳಲ್ಲಿ ಪದಕ ಗೆದ್ದ ಭಾರತದ ಏಕೈಕ ಮಹಿಳೆ ಎನ್ನುವ ದಾಖಲೆ ಬರೆದಿದ್ದರು. ದೀಪಾ 2012ರಲ್ಲಿ ಅರ್ಜುನ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

2 ದಿನಗಳ ಕಾಲ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ, ಮೊದಲ ದಿನವಾದ ಶುಕ್ರವಾರವೇ ಭಜರಂಗ್‌ ಪೂನಿಯಾ ಹೆಸರನ್ನು ಸಮಿತಿ ಶಿಫಾರಸು ಮಾಡಿತ್ತು. 4 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳನ್ನು ಖೇಲ್‌ ರತ್ನ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪದಕ, ಪ್ರಮಾಣ ಪತ್ರ, ಸಮಾರಂಭದ ಪೋಷಾಕು ಹಾಗೂ 7.50 ಲಕ್ಷ ರುಪಾಯಿ ಬಹುಮಾನ ಮೊತ್ತ ನೀಡಿ ಗೌರವಿಸಲಾಗುತ್ತದೆ.

ಆಯ್ಕೆ ಸಮಿತಿ 19 ಮಂದಿಯನ್ನು ಅರ್ಜುನ ಪ್ರಶಸ್ತಿಗೂ ಆಯ್ಕೆ ಮಾಡಿತು. ಕ್ರಿಕೆಟಿಗರಾದ ರವೀಂದ್ರ ಜಡೇಜಾ, ಪೂನಮ್‌ ಯಾದವ್‌, ಅಥ್ಲೀಟ್‌ಗಳಾದ ತೇಜಿಂದರ್‌ ಪಾಲ್‌ ಸಿಂಗ್‌, ಮೊಹಮದ್‌ ಅನಾಸ್‌, ಸ್ವಪ್ನಾ ಬರ್ಮನ್‌, ಫುಟ್ಬಾಲಿಗ ಗುರ್‌ಪ್ರೀತ್‌ ಸಿಂಗ್‌ ಸಂಧು, ಹಾಕಿ ಆಟಗಾರ ಚಿಂಗ್ಲೆನ್ಸಾನ ಸಿಂಗ್‌, ಶೂಟರ್‌ ಅಂಜುಮ್‌ ಮೌದ್ಗಿಲ್‌ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.

ಅರ್ಜುನ ಪ್ರಶಸ್ತಿಗೆ ರವೀಂದ್ರ ಜಡೇಜಾ ಹೆಸರು ಶಿಫಾರಸು

2018ರ ಜಕಾರ್ತ ಏಷ್ಯನ್‌ ಗೇಮ್ಸ್‌ನ ಈಕ್ವೆಸ್ಟ್ರಿಯನ್‌ ಕ್ರೀಡೆಯ ವೈಯಕ್ತಿಕ ಹಾಗೂ ತಂಡ ವಿಭಾಗ ಎರಡರಲ್ಲೂ ಬೆಳ್ಳಿ ಪದಕ ಗೆದ್ದಿದ್ದ ಬೆಂಗಳೂರಿನ ಫೌವಾದ್‌ ಮಿರ್ಜಾ ಸಹ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. ನಿಯಮದ ಪ್ರಕಾರ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗುವ ಕ್ರೀಡಾಪಟು ಕಳೆದ 4 ವರ್ಷಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ತೋರಿರಬೇಕು. ಜತೆಗೆ ಉತ್ತಮ ನಾಯಕತ್ವ ಗುಣ, ಕ್ರೀಡಾಸ್ಫೂರ್ತಿ ಹಾಗೂ ಶಿಸ್ತು ಹೊಂದಿರಬೇಕು.

ಕುಸ್ತಿಪಟು ಭಜರಂಗ್‌ಗೆ ಖೇಲ್‌ರತ್ನ ಖಚಿತ

ಇದೇ ವೇಳೆ ಗೌತಮ್‌ ಗಂಭೀರ್‌ರ ಬಾಲ್ಯದ ಕೋಚ್‌ ಸಂಜಯ್‌ ಭಾರದ್ವಾಜ್‌ಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ದೊರೆತಿದೆ. ಸೈನಾ ನೆಹ್ವಾಲ್‌ರ ಕೋಚ್‌ ವಿಮಲ್‌ ಕುಮಾರ್‌ ಸೇರಿದಂತೆ ಮೂವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಐವರು ಧ್ಯಾನ್‌ಚಂದ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಖೇಲ್‌ ರತ್ನ ಪ್ರಶಸ್ತಿ

ಕ್ರೀಡಾಪಟು    ಕ್ರೀಡೆ

ಭಜರಂಗ್‌ ಪೂನಿಯಾ    ಕುಸ್ತಿ

ದೀಪಾ ಮಲಿಕ್‌    ಪ್ಯಾರಾ ಅಥ್ಲೆಟಿಕ್ಸ್‌

ಅರ್ಜುನ ಪ್ರಶಸ್ತಿ

ಕ್ರೀಡಾಪಟು    ಕ್ರೀಡೆ

ತೇಜಿಂದರ್‌ ಪಾಲ್‌    ಅಥ್ಲೆಟಿಕ್ಸ್‌

ಮೊಹಮದ್‌ ಅನಾಸ್‌    ಅಥ್ಲೆಟಿಕ್ಸ್‌

ಎಸ್‌. ಭಾಸ್ಕರನ್‌    ಬಾಡಿ ಬಿಲ್ಡಿಂಗ್‌

ಸೋನಿಯಾ ಲಾಥರ್‌    ಬಾಕ್ಸಿಂಗ್‌

ರವೀಂದ್ರ ಜಡೇಜಾ    ಕ್ರಿಕೆಟ್‌

ಚಿಂಗ್ಲೆನ್ಸಾನ ಸಿಂಗ್‌    ಹಾಕಿ

ಅಜಯ್‌ ಠಾಕೂರ್‌ ಕಬಡ್ಡಿ

ಗೌರವ್‌ ಗಿಲ್‌    ಮೋಟಾರ್‌ ಸ್ಪೋಟ್ಸ್‌ರ್‍

ಪ್ರಮೋದ್‌ ಭಗತ್‌    ಪ್ಯಾರಾ ಬ್ಯಾಡ್ಮಿಂಟನ್‌

ಅಂಜುಮ್‌ ಮೌದ್ಗಿಲ್‌    ಶೂಟಿಂಗ್‌

ಹರ್ಮೀತ್‌ ದೇಸಾಯಿ    ಟೇಬಲ್‌ ಟೆನಿಸ್‌

ಪೂಜಾ ಧಂಡ    ಕುಸ್ತಿ

ಫೌವಾದ್‌ ಮಿರ್ಜಾ    ಈಕ್ವೆಸ್ಟ್ರಿಯನ್‌

ಗುರ್‌ಪ್ರೀತ್‌ ಸಂಧು    ಫುಟ್ಬಾಲ್‌

ಪೂನಮ್‌ ಯಾದವ್‌    ಕ್ರಿಕೆಟ್‌

ಸ್ವಪ್ನಾ ಬರ್ಮನ್‌    ಅಥ್ಲೆಟಿಕ್ಸ್‌

ಸುಂದರ್‌ ಸಿಂಗ್‌    ಪ್ಯಾರಾ ಅಥ್ಲೆಟಿಕ್ಸ್‌

ಬಿ.ಸಾಯಿ ಪ್ರಣೀತ್‌    ಬ್ಯಾಡ್ಮಿಂಟನ್‌

ಸಿಮ್ರನ್‌ ಸಿಂಗ್‌    ಪೋಲೋ

ದ್ರೋಣಾಚಾರ್ಯ ಪ್ರಶಸ್ತಿ

ಕೋಚ್‌    ಕ್ರೀಡೆ

ವಿಮಲ್‌ ಕುಮಾರ್‌    ಬ್ಯಾಡ್ಮಿಂಟನ್‌

ಸಂದೀಪ್‌ ಗುಪ್ತಾ    ಟೇಬಲ್‌ ಟೆನಿಸ್‌

ಮೋಹಿಂದರ್‌ ಸಿಂಗ್‌    ಅಥ್ಲೆಟಿಕ್ಸ್‌

ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ

ಕೋಚ್‌    ಕ್ರೀಡೆ

ಮೆಹರ್‌ಬಾನ್‌ ಪಟೇಲ್‌    ಹಾಕಿ

ರಾಮ್‌ಬೀರ್‌ ಸಿಂಗ್‌ ಕಬಡ್ಡಿ

ಸಂಜಯ್‌ ಭಾರದ್ವಾಜ್‌    ಕ್ರಿಕೆಟ್‌

ಧ್ಯಾನ್‌ಚಂದ್‌ ಪ್ರಶಸ್ತಿ

ಕ್ರೀಡಾಪಟು    ಕ್ರೀಡೆ

ಮ್ಯಾನುಯೆಲ್‌ ಫೆಡ್ರಿಕ್ಸ್‌    ಹಾಕಿ

ಅರೂಪ್‌ ಬಸಾಕ್‌    ಟೇಬಲ್‌ ಟೆನಿಸ್‌

ಮನೋಜ್‌ ಕುಮಾರ್‌    ಕುಸ್ತಿ

ನಿಟ್ಟೆನ್‌ ಕಿರ್ರಟಾನೆ    ಟೆನಿಸ್‌

ಸಿ.ಲಾಲ್ರೆಮ್ಸಂಗಾ    ಆರ್ಚರಿ