ಕನ್ನಡದ ಪ್ರತಿಭೆ ಮಯಾಂಕ್ ಅಗರ್’ವಾಲ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಡ್ರೀಮ್ ಡೆಬ್ಯೂ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಮಯಾಂಕ್ ಚೊಚ್ಚಲ ಪಂದ್ಯದಲ್ಲೇ 76 ರನ್ ಸಿಡಿಸಿ ಗಮನ ಸೆಳೆದಿದ್ದರು. ಅಲ್ಲದೇ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2 ಅರ್ಧಶತಕ ಸಿಡಿಸಿದ ಭಾರತದ ಏಕೈಕ ಆರಂಭಿಕ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ಮಯಾಂಕ್ ಭಾಜನರಾದರು. ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾದ ಆಶಾಕಿರಣ ಎನಿಸಿರುವ ಮಯಾಂಕ್ ಅಗರ್’ವಾಲ್ ಆಸಿಸ್ ಪ್ರವಾಸದ ಬಗ್ಗೆ ಸುವರ್ಣನ್ಯೂಸ್.ಕಾಂನೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ನಿಮ್ಮ ಮುಂದೆ... 

1. ಚೊಚ್ಚಲ ಸರಣಿಯಲ್ಲೇ ಐತಿಹಾಸಿಕ ಗೆಲುವಿನ ತಂಡದ ಭಾಗವೆನಿಸಿದ್ದಕ್ಕೆ ಏನನ್ನಿಸುತ್ತಿದೆ..? 

ತುಂಬಾನೇ ಖುಷಿ ಎನಿಸುತ್ತಿದೆ. ಭಾರತ ತಂಡ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿತು. ಉಪಖಂಡದ ತಂಡ ಇದೇ ಮೊದಲ ಬಾರಿಗೆ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ತಂಡದ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ.

2. ಸರಣಿ ಗೆಲುವಿನ ಬಳಿಕ ಕೊಹ್ಲಿ ಕಪ್ ನಿಮ್ಮ ಕೈಗಿತ್ತಾಗ ಏನು ಅನ್ನಿಸಿತು..?

ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಬಳಿಕ ಕಪ್ ನಾನು ಎತ್ತಿಹಿಡಿದ ಆ ಕ್ಷಣಗಳನ್ನು ನಾನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಸಖತ್ ಖುಷಿ ಆಯ್ತು. ಆ ಕ್ಷಣ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು.

3. ನೀವು ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಬಹುದು ಎಂದು ನಿರೀಕ್ಷಿಸಿದ್ರಾ..?

ನಾನು ಒವರ್’ಸೀಸ್’ನಲ್ಲಿ ಡೆಬ್ಯೂ ಮಾಡ್ತೀನಿ ಎಂದು ನಿರೀಕ್ಷಿಸಿರಲಿಲ್ಲ. ನಾನು ಭಾರತ ’ಎ’ ಪರ ಆಡಿ, ಬಳಿಕ ರಣಜಿ ಪಂದ್ಯವನ್ನಾಡುತ್ತಿದ್ದೆ. ದಿಡೀರ್ ಆಗಿ ರಾಷ್ಟ್ರೀಯ ತಂಡದಿಂದ ನನಗೆ ಕರೆಬಂತು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದನ್ನು ಕೇಳಿ ತುಂಬಾ ಖುಷಿಯಾಯ್ತು. 

4. ಐತಿಹಾಸಿಕ ಬಾಕ್ಸಿಂಗ್ ಡೇ ಟೆಸ್ಟ್’ಗೆ ನಿಮ್ಮ ತಯಾರಿ ಹೇಗಿತ್ತು..?

ತಂಡ ಕೂಡಿಕೊಂಡ ಬಳಿಕ ನನಗೆ ಮೆಲ್ಬರ್ನ್’ನಲ್ಲಿ ಪ್ರಾಕ್ಟೀಸ್ ನಡೆಸಲು ಮೂರ್ನಾಲ್ಕು ದಿನ ಸಿಕ್ತು. ನೆಟ್ ಪ್ರಾಕ್ಟೀಸ್ ಮಾಡಿ ಟೆಸ್ಟ್’ಗೆ ರೆಡಿಯಾದೆ. ಮೊದಲ ಬಾಲ್ ಎದುರಿಸುವಾಗ ಸಾಕಷ್ಟು ನರ್ವಸ್ ಆಗಿದ್ದೆ. ಒಂದೆರಡು ಓವರ್ ಎದುರಿಸಿದ ನಂತರ ಪಿಚ್’ಗೆ ನಾನು ಹೊಂದಿಕೊಂಡೆ.

5. ನಿಮ್ಮನ್ನು ಈಗಾಗಲೇ ಜೂನಿಯರ್ ಸೆಹ್ವಾಗ್ ಎಂದು ಕರೆಯುತ್ತಿರುವುದರ ಬಗ್ಗೆ ಏನಂತೀರಾ..?

ನಾನು ಯಾರೊಂದಿಗೂ ಹೋಲಿಸಿಕೊಳ್ಳಲು ಬಯಸುವುದಿಲ್ಲ. ಅವರ ಜತೆಗೆ ನನ್ನನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಸೆಹ್ವಾಗ್ ಒಬ್ಬ ಲೆಜೆಂಡ್ ಕ್ರಿಕೆಟರ್, ನಾನು ಈಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಾಲಿಡುತ್ತಿದ್ದೇನೆ. ನನ್ನ ಮುಂದಿರೋ ಸವಾಲು ಅಂದ್ರೆ ಕಠಿಣ ಅಭ್ಯಾಸ ನಡೆಸೋದು, ತಂಡದ ಪರವಾಗಿ ಬೆಸ್ಟ್ ಫರ್ಪಾರ್’ಮೆನ್ಸ್ ನೀಡೋದು ಅಷ್ಟೆ.

6. ಮಯಾಂಕ್ ಸ್ಪಿನ್ನರ್ ನೇಥನ್ ಲಯನ್ ಅವರನ್ನೇ ಟಾರ್ಗೆಟ್ ಮಾಡಿದ್ದೇಕೆ..?

ನಾನು ಮೊದಲೇ ನೇಥನ್ ಲಯನ್ ಎದುರಿಸಲು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಜತೆ ಚರ್ಚಿಸಿ ಪ್ಲಾನ್ ಮಾಡಿ ಕ್ರೀಸ್’ಗಿಳಿದಿದ್ದೆ. ನಾನು ಪಿಚ್’ಗೆ ಅಡ್ಜೆಸ್ಟ್ ಆದ ಬಳಿಕ ಅಟ್ಯಾಕ್ ಮಾಡಲಾರಂಭಿಸಿದೆ. ಸರಣಿಯಲ್ಲಿ ಆಸಿಸ್ ಪರ ಲಯನ್ ಗರಿಷ್ಠ ವಿಕೆಟ್ ಪಡೆದಿದ್ದರು. ಹೀಗಾಗಿ ಲಯನ್’ಗೆ ಡಾಮಿನೇಟ್ ಮಾಡಲು ಬಿಡಬಾರದು ಎಂದು ಮೊದಲೇ ತೀರ್ಮಾನಿಸಿದೆ. ಅದರಂತೆ ಆಡಿದೆ, ಅದರಲ್ಲಿ ಯಶಸ್ವಿಯೂ ಆದೆ.

7. ಸಿಡ್ನಿ ಟೆಸ್ಟ್'ನಲ್ಲಿ ಶತಕದ ಹೊಸ್ತಿಲಲ್ಲಿದ್ದಾಗ ಮತ್ತೊಂದು ಸಿಕ್ಸರ್ ಅವಶ್ಯಕತೆಯಿತ್ತಾ..?

ನಾನು ಆದಷ್ಟು ಲಯನ್ ಅವರನ್ನು ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಲೇ ಇದ್ದೆ. ಆದರೆ ಒಂದು ಮಿಸ್ಟೇಕ್’ಗೆ ಬೆಲೆತೆರಬೇಕಾಗಿ ಬಂತು. ನಾನು ಔಟಾಗಿದ್ದರ ಬಗ್ಗೆ ನನಗೂ ಬೇಸರವಿದೆ ನನಗೆ ಇದೊಂದು ಪಾಠ, ಮುಂದೆ ಈ ರೀತಿಯ ತಪ್ಪು ಮಾಡೋದಿಲ್ಲ.

8. ಮಯಾಂಕ್ ಅಗರ್’ವಾಲ್ ಅವರನ್ನು ಬ್ಲೂ ಜೆರ್ಸಿಯಲ್ಲಿ ನೋಡೋದು ಯಾವಾಗ..?

ನಾನು ಹಾರ್ಡ್ ವರ್ಕ್ ಮಾಡ್ತಾ ಇದೇನೆ. ನನ್ನ ಗುರಿ ಏನಿದ್ದರು ಒಳ್ಳೆಯ ಕ್ರಿಕೆಟ್ ಆಡುವುದು, ಸೆಂಚುರಿ ಬಾರಿಸುವುದರತ್ತ ಗಮನ ಹರಿಸುತ್ತೇನೆ. ಮುಂದೇನಾಗುತ್ತದೋ ನೋಡೋಣ.

9. ಕೊಹ್ಲಿ ಜತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದರ ಬಗ್ಗೆ..?

ನಾನು ತಂಡ ಕೂಡಿಕೊಂಡಾಗ ಎಲ್ಲರೂ ವಾರ್ಮ್ ವೆಲ್’ಕಂ ಮಾಡಿದ್ರು. ಕಂಪರ್ಟೇಬಲ್ ವಾತಾವರಣ ಇತ್ತು. ಜತೆಗೆ ಎಲ್ಲರೂ ಆತ್ಮವಿಶ್ವಾಸ ತುಂಬಿದರು, ಹೀಗಾಗಿಯೇ ನನ್ನಿಂದ ನೈಜ ಆಟ ಮೂಡಿ ಬರಲು ಸಾಧ್ಯವಾಯಿತು.

10. ರಣಜಿ ಟ್ರೋಫಿಯಲ್ಲೀಗ ಕರ್ನಾಟಕ ಕ್ವಾರ್ಟರ್’ಫೈನಲ್’ಗೇರಿದೆ, ಮತ್ತೆ ರಾಜ್ಯ ತಂಡ ಕೂಡಿಕೊಳ್ಳುತ್ತೀರಾ..?

ಮೊದಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡವನ್ನು ಪ್ರಕಟಿಸುತ್ತೆ. ನಾನು ಅವರೊಂದಿಗೆ ಮಾತನಾಡುತ್ತೇನೆ. ಸದ್ಯಕ್ಕೆ ನಾನು ಈ ಬಗ್ಗೆ ಏನನ್ನೂ ಹೇಳಲಾರೆ.

ಸಂದರ್ಶನ: ನವೀನ್ ಕೊಡಸೆ