Asianet Suvarna News Asianet Suvarna News

ಬೆಂಗಳೂರು ಫ್ಯಾನ್ಸ್'ಗೆ ಚಾಲೆಂಜ್; ಕಂಠೀರವ ಸ್ಟೇಡಿಯಂನ ಜನಪ್ರಿಯ ವೆಸ್ಟ್'ಬ್ಲಾಕ್ ಆಕ್ರಮಣಕ್ಕೆ ಕೇರಳಿಗರು ಸಜ್ಜು

ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರು ಎಫ್'ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡದ ನಡುವಿನ ಪಂದ್ಯವು 2018ರ ಮಾರ್ಚ್ 1 ರಂದು ನಡೆಯಲಿದೆ. ಕೇರಳದ ಫ್ಯಾನ್ಸ್ ಈಗಲೇ ಟಿಕೆಟ್ ಬುಕ್ ಮಾಡಲು ಆರಂಭಿಸಿದ್ದಾರೆ. ಬುಕ್'ಮೈಶೋ ತಾಣದಲ್ಲಿ ಈಸ್ಟರ್ನ್ ಸ್ಟ್ಯಾಂಡ್'ನ ಬುಕ್ಕಿಂಗ್ ಬ್ಲಾಕ್ ಆಗಿದೆ ಎಂದು ಪಿತ್ತ ನೆತ್ತಿಗೇರಿಸಿಕೊಂಡಿರುವ ಕೇರಳದ ಅಭಿಮಾನಿಗಳು ಬಿಎಫ್'ಸಿ ವಿರುದ್ಧ ಆಕ್ರೋಶದ ಕೆಂಪೇನ್ ಶುರು ಮಾಡಿದ್ದಾರೆ.

kerala blasters fans keen to occupy west block stand of kantheerava stadium in bengaluru
  • Facebook
  • Twitter
  • Whatsapp

ಬೆಂಗಳೂರು(ನ. 10): ಇನ್ನೊಂದು ವಾರದಲ್ಲಿ ಭಾರತದಲ್ಲಿ ಮತ್ತೊಮ್ಮೆ ಫುಟ್ಬಾಲ್ ಫೀವರ್ ಆರಂಭವಾಗುತ್ತಿದೆ. ನ.17ರಿಂದ ನಾಲ್ಕು ತಿಂಗಳ ಕಾಲ ಇಂಡಿಯನ್ ಸೂಪರ್ ಲೀಗ್ ನಡೆಯುತ್ತಿದೆ. ಬೆಂಗಳೂರು ಫುಟ್ಬಾಲ್ ಕ್ಲಬ್ ಈ ಬಾರಿಯ ಐಎಸ್'ಎಲ್'ಗೆ ಲಗ್ಗೆ ಇಟ್ಟಿರುವುದರಿಂದ ಬೆಂಗಳೂರಿನ ಫುಟ್ಬಾಲ್ ಫ್ಯಾನ್ಸ್'ಗೆ ದೊಡ್ಡ ಹಬ್ಬವೆನಿಸಿದೆ. ಐ-ಲೀಗ್'ನ 4 ಆವೃತ್ತಿಗಳಲ್ಲಿ ಅಪೂರ್ವ ಯಶಸ್ಸು ಗಳಿಸಿರುವ ಬಿಎಫ್'ಸಿ ತಂಡಕ್ಕೆ ಪ್ರಬಲ ಫ್ಯಾನ್ಸ್'ಗಳ ಬೆಂಬಲವಿದೆ. ಐ-ಲೀಗ್'ನ ಪಂದ್ಯಗಳಲ್ಲಿ ಇದು ಸ್ಪಷ್ಟವಾಗಿ ವೇದ್ಯವಾಗಿದೆ. ಬೆಂಗಳೂರು ಪ್ರೇಕ್ಷಕರ ಸದ್ದಿಗೆ, ಅದರಲ್ಲೂ ಸ್ಟೇಡಿಯಂನ ವೆಸ್ಟ್'ಬ್ಲಾಕ್ ಸ್ಟ್ಯಾಂಡ್'ನಲ್ಲಿರುವ ಬಿಎಫ್'ಸಿ ಸಪೋರ್ಟರ್ಸ್'ನ ಕಿರುಚಾಟಕ್ಕೆ ಎದುರಾಳಿ ತಂಡಗಳು ಬೇಸ್ತುಬಿದ್ದುಹೋಗಿರುವುದುಂಟು. ಈಗ ಐ-ಲೀಗ್'ಗಿಂತಲೂ ಹೆಚ್ಚು ಜನಪ್ರಿಯವಾಗಿರುವ ಮತ್ತು ಸ್ಪರ್ಧಾತ್ಮಕವಾಗಿರುವ ಇಂಡಿಯನ್ ಸೂಪರ್ ಲೀಗ್'ನಲ್ಲಿ ತಮ್ಮ ತಂಡಕ್ಕೆ ಇನ್ನೂ ಪ್ರಬಲ ಸಪೋರ್ಟ್ ಕೊಡಲು ಬಿಎಫ್'ಸಿ ಫ್ಯಾನ್ಸ್ ಸಜ್ಜಾಗಿದ್ದಾರೆ.

ಇನ್ನೊಂದೆಡೆ, ಈಶಾನ್ಯ ಭಾರತ, ಪಶ್ಚಿಮ ಬಂಗಾಳ ಮತ್ತು ಕೇರಳದ ಪ್ರದೇಶಗಳಲ್ಲಿ ಫುಟ್ಬಾಲ್'ಗೆ ಸಾಂಪ್ರದಾಯಿಕವಾಗಿ ಕ್ರೇಜ್ ಇದೆ. ಇಲ್ಲಿ ಫೂಟ್ಬಾಲ್ ಹುಚ್ಚು ರಕ್ತಗತವಾಗಿಯೇ ಇದೆ. ಇಲ್ಲಿ ನಡೆಯುವ ಎಲ್ಲಾ ಪಂದ್ಯಗಳಿಗೂ ಸ್ಟೇಡಿಯಂಗಳು ಕಿಕ್ಕಿರಿದು ತುಂಬಿಹೋಗಿರುತ್ತವೆ. ಕೇರಳದ ಫುಟ್ಬಾಲ್ ಫ್ಯಾನ್ಸ್ ಕೂಡ ಬಹಳ ಸ್ಟ್ರಾಂಗ್. ಬೆಂಗಳೂರಿಗರಿಗಿಂತಲೂ ಎರಡು ಹೆಜ್ಜೆ ಮುಂದಿರುವ ಕೇರಳಿಗರು ಹೊರಗಿನ ಪಂದ್ಯಗಳಿಗೂ ಹೋಗಿ ಸ್ಟೇಡಿಯಂಗಳಿಗೆ ಲಗ್ಗೆ ಹಾಕಿ ತಮ್ಮ ತಂಡವನ್ನು ಸಪೋರ್ಟ್ ಮಾಡುತ್ತಾರೆ. ಬೆಂಗಳೂರು ಕೇರಳಕ್ಕೆ ಸಮೀಪವೇ ಇರುವುದರಿಂದ ಅಲ್ಲಿಂದ ಫ್ಯಾನ್ಸ್ ದೊಡ್ಡ ಪ್ರಮಾಣದಲ್ಲಿ ಹರಿದುಬರುವ ನಿರೀಕ್ಷೆ ಇದೆ.

ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರು ಎಫ್'ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡದ ನಡುವಿನ ಪಂದ್ಯವು 2018ರ ಮಾರ್ಚ್ 1 ರಂದು ನಡೆಯಲಿದೆ. ಕೇರಳದ ಫ್ಯಾನ್ಸ್ ಈಗಲೇ ಟಿಕೆಟ್ ಬುಕ್ ಮಾಡಲು ಆರಂಭಿಸಿದ್ದಾರೆ. ಬುಕ್'ಮೈಶೋ ತಾಣದಲ್ಲಿ ಈಸ್ಟರ್ನ್ ಸ್ಟ್ಯಾಂಡ್'ನ ಬುಕ್ಕಿಂಗ್ ಬ್ಲಾಕ್ ಆಗಿದೆ ಎಂದು ಪಿತ್ತ ನೆತ್ತಿಗೇರಿಸಿಕೊಂಡಿರುವ ಕೇರಳದ ಅಭಿಮಾನಿಗಳು ಬಿಎಫ್'ಸಿ ವಿರುದ್ಧ ಆಕ್ರೋಶದ ಕೆಂಪೇನ್ ಶುರು ಮಾಡಿದ್ದಾರೆ. ಬೆಂಗಳೂರು ಎಫ್'ಸಿ ಫ್ಯಾನ್ಸ್'ನ ನೆಚ್ಚಿನ ವೆಸ್ಟ್'ಬ್ಲಾಕ್ ಎ ಸ್ಟ್ಯಾಂಡ್'ನ್ನು ಆಕ್ರಮಿಸಿಕೊಳ್ಳಲು ಕೇರಳದ ಫ್ಯಾನ್ಸ್ ಕ್ಲಬ್'ವೊಂದು ಕರೆ ನೀಡಿದೆ. ಟ್ವಿಟ್ಟರ್'ನಲ್ಲಿ #OccupyWestBlock ಹ್ಯಾಷ್'ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.

ಹೀಗಾದರೆ, ವೆಸ್ಟ್'ಬ್ಲಾಕ್ ಸ್ಟ್ಯಾಂಡ್'ನಲ್ಲಿ ಕಾಣಸಿಗುತ್ತಿದ್ದ ನೀಲಿ ಬಣ್ಣದ ಯೂನಿಫಾರ್ಮ್'ಗಳ ಬದಲಿಗೆ ಕೇರಳಿಗರ ಹಳದಿ ಸೇನೆ ಕುಣಿದು ಕುಪ್ಪಳಿಸುವುದನ್ನು ನೋಡಬೇಕಾಗುತ್ತದೆ. ತವರಿನಲ್ಲೇ ಬೆಂಗಳೂರಿಗರು ಮೂಕಪ್ರೇಕ್ಷಕರಾಗಿ ಕೂತು ಪಂದ್ಯ ವೀಕ್ಷಿಸಬೇಕಾಗುತ್ತದೆ. ಬೆಂಗಳೂರು ಕ್ಲಬ್'ನ ಫ್ಯಾನ್ಸ್ ಅಷ್ಟು ಸುಲಭಕ್ಕೆ ವೆಸ್ಟ್'ಬ್ಲಾಕ್ ಸ್ಟ್ಯಾಂಡ್ ಬಿಟ್ಟುಕೊಡೋದಿಲ್ಲ.

Follow Us:
Download App:
  • android
  • ios