ಬೆಂಗಳೂರು[ಜ.11]: 2018-19ರ ರಣಜಿ ಪಂದ್ಯಾವಳಿಯ ನಾಕೌಟ್ ಹಂತದ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಜ. 15 ರಿಂದ 19 ರವರೆಗೆ ಪಂದ್ಯ ನಡೆಯಲಿದೆ. ಕರ್ನಾಟಕ ತಂಡ, ಪ್ರಬಲ ರಾಜಸ್ಥಾನ ಎದುರು ಸೆಣಸಲಿದೆ. ರಣಜಿ ಲೀಗ್ ಹಂತದ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ಮಧ್ಯಪ್ರದೇಶ ಹೀನಾಯ ಸೋಲು ಕಂಡಿದ್ದರಿಂದ ಕರ್ನಾಟಕ ನಾಕೌಟ್‌ಗೆ ಅರ್ಹತೆ ಪಡೆದಿದೆ.

ವಡೋದರದಲ್ಲಿ ನಡೆದಿದ್ದ ರಣಜಿ ಟ್ರೋಫಿಯ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಬರೋಡಾ ವಿರುದ್ಧ ಎರಡೇ ದಿನದಲ್ಲಿ ಪರಾಭವ ಹೊಂದಿದ್ದ ಮಾಜಿ ಚಾಂಪಿಯನ್ ಕರ್ನಾಟಕ ತಂಡ, ನಾಕೌಟ್ ಹಂತಕ್ಕೇರಲು ಇತರ ತಂಡಗಳ ಫಲಿತಾಂಶಕ್ಕಾಗಿ ಎದುರು ನೋಡುತ್ತಿತ್ತು. ಅದರಂತೆ ಮಧ್ಯಪ್ರದೇಶ ತಂಡ, ಆಂಧ್ರಪ್ರದೇಶ ವಿರುದ್ಧ 307 ರನ್‌ಗಳ ಸೋತಿದ್ದರಿಂದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಕ್ವಾರ್ಟರ್‌ಫೈನಲ್‌ಗೇರಿತು. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲಿವೆ. ಸದ್ಯ ಕರ್ನಾಟಕ ತಂಡ (27) ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ವಿದರ್ಭ ಮತ್ತು ಸೌರಾಷ್ಟ್ರ ತಲಾ 29 ಅಂಕಗಳೊಂದಿಗೆ ಮೊದಲೆರಡು ಸ್ಥಾನ ಪಡೆದಿವೆ. ಕೇರಳ ಹಾಗೂ ಗುಜರಾತ್ ತಲಾ 26 ಅಂಕಗಳೊಂದಿಗೆ 4 ಹಾಗೂ 5ನೇ ಸ್ಥಾನ ಪಡೆದಿವೆ.

ತವರಿನ ಲಾಭ: ಲೀಗ್ ಹಂತದಲ್ಲಿ ಕರ್ನಾಟಕ ತಂಡ 3 ಗೆಲುವು, 3 ಡ್ರಾ ಮತ್ತು 2 ಸೋಲಿನೊಂದಿಗೆ ‘ಎ’ ಹಾಗೂ ‘ಬಿ’ ಗುಂಪಿನ ಪಟ್ಟಿಯಲ್ಲಿ 3ನೇ ಸ್ಥಾನದೊಂದಿಗೆ ಕ್ವಾರ್ಟರ್‌ಗೇರಿದೆ. ಪ್ರಬಲ ರಾಜಸ್ಥಾನ ವಿರುದ್ಧ ತವರಿನಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯವನ್ನಾಡುತ್ತಿದೆ. ಹೀಗಾಗಿ ಕರ್ನಾಟಕ ತಂಡ ತವರಿನ ಲಾಭ ಪಡೆಯಲಿದೆ. ಕರ್ನಾಟಕ ತಂಡ ಹೆಚ್ಚಿನ ಪ್ರಯೋಗಕ್ಕೆ ಒಡ್ಡಿಕೊಳ್ಳದೇ ಅನುಭವಿ ಆಟಗಾರರನ್ನು 11ರ ಬಳಗದಲ್ಲಿ ಆಡಿಸುವ ಯೋಚನೆಯಲ್ಲಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿಶ್ರಾಂತಿಯಲ್ಲಿದ್ದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಮತ್ತು ವೇಗಿ ಅಭಿಮನ್ಯು ಮಿಥುನ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

2015-16ರಲ್ಲಿ ವಿದರ್ಭ ವಿರುದ್ಧ ಪಂದ್ಯ: 4 ವರ್ಷಗಳ ಹಿಂದೆ ಚಿನ್ನಸ್ವಾಮಿಯಲ್ಲಿ ವಿದರ್ಭ ವಿರುದ್ಧ ಕರ್ನಾಟಕ ತಂಡ ರಣಜಿ ಪಂದ್ಯವನ್ನಾಡಿತ್ತು. ಸದ್ಯ ತಟಸ್ಥ ಸ್ಥಳಗಳಲ್ಲಿ ರಣಜಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ರಾಜ್ಯದ ಇತರ ಜಿಲ್ಲೆಗಳಲ್ಲಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿತ್ತು ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದ್ದಾರೆ. ರಾಜಸ್ಥಾನ ವಿರುದ್ಧ ಕರ್ನಾಟಕ ಕ್ವಾರ್ಟರ್ ಫೈನಲ್ ಪಂದ್ಯವನ್ನು ಚಿನ್ನಸ್ವಾಮಿಯಲ್ಲಿ ಪಂದ್ಯವನ್ನಾಡುತ್ತಿದೆ. 

ತಂಡಗಳ ಆಯ್ಕೆಯಲ್ಲಿ ಗೊಂದಲ: ಲೀಗ್ ಹಂತದ ಪಂದ್ಯಗಳಲ್ಲಿ ತಂಡದ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಇದ್ದವು. ಪ್ರತಿ ಪಂದ್ಯದಲ್ಲೂ ಕರ್ನಾಟಕ ತಂಡ ಆಟಗಾರರನ್ನು ಬದಲು ಮಾಡಿದೆ. ಅನುಭವಿ ಬ್ಯಾಟ್ಸ್‌ಮನ್‌ಗಳಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಅವಕಾಶ ನೀಡಿದೆ. ವಿನಯ್ ಕುಮಾರ್, ಮಿಥುನ್, ಸಮರ್ಥ್, ಕರುಣ್ ನಾಯರ್ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ಲೀಗ್‌ನಂತೆ ನಾಕೌಟ್ ಹಂತದಲ್ಲಿಯೂ ಕರ್ನಾಟಕ ತಂಡ ಆಟಗಾರರ ಆಯ್ಕೆಯಲ್ಲಿ ಗೊಂದಲ ಮಾಡಿಕೊಳ್ಳದೆ, ಫಾರ್ಮ್‌ನಲ್ಲಿರುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕಿದೆ.