ಈಗಾಗಲೇ ಕರ್ನಾಟಕ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಮೊದಲನೆಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಡ್ರಾ ಸಾಧಿಸಿದರೆ, ಆನಂತರ ದೆಹಲಿ ಮತ್ತು ಅಸ್ಸಾಂ ವಿರುದ್ಧ ಭರ್ಜರಿ ಸಾಧಿಸಿ ಅಂಕಪಟ್ಟಿಯಲ್ಲಿ 17 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ವಡೋದರ(ನ.04): ಅನುಭವಿ ಹಾಗೂ ಯುವ ಆಟಗಾರರ ಸಂಗಮದಲ್ಲಿ ಅತ್ಯಾಕರ್ಷಕ ಪ್ರದರ್ಶನ ನೀಡುತ್ತಾ ಸಾಗಿರುವ ಕರ್ನಾಟಕ ತಂಡ, ರಣಜಿ ಪಂದ್ಯಾವಳಿಯ ‘ಬಿ’ ಗುಂಪಿನ ವಿಭಾಗದ ತನ್ನ ನಾಲ್ಕನೇ ಪಂದ್ಯದಲ್ಲಿ ವಿದರ್ಭ ಎದುರು ಸೆಣಸುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ಗುರಿ ಹೊತ್ತಿದೆ.

ಇಲ್ಲಿನ ಮೋತಿಬಾಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾಗುವ ಪಂದ್ಯದಲ್ಲಿ ಪ್ರಭಾವಿ ಪ್ರದರ್ಶನ ತೋರುವ ದೃಷ್ಟಿಯಿಂದ ಕರ್ನಾಟಕ ತಂಡ ಕಠಿಣ ಅಭ್ಯಾಸ ನಡೆಸಿದೆ. ಈಗಾಗಲೇ ಕರ್ನಾಟಕ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಮೊದಲನೆಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಡ್ರಾ ಸಾಧಿಸಿದರೆ, ಆನಂತರ ದೆಹಲಿ ಮತ್ತು ಅಸ್ಸಾಂ ವಿರುದ್ಧ ಭರ್ಜರಿ ಸಾಧಿಸಿ ಅಂಕಪಟ್ಟಿಯಲ್ಲಿ 17 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಕರುಣ್ ಅಲಭ್ಯ

ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕ ತಂಡದ ಪ್ರಬಲ ಬ್ಯಾಟ್ಸ್‌ಮನ್ ಆಗಿದ್ದಲ್ಲದೆ, ಕಳೆದ ಭಾನುವಾರ ಮುಕ್ತಾಯ ಕಂಡಿದ್ದ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಕರ್ನಾಟಕಕ್ಕೆ 10 ವಿಕೆಟ್‌ಗಳ ಭವ್ಯ ಗೆಲುವು ತಂದಿತ್ತಿದ್ದ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ನಿಮಿತ್ತ ರಾಜ್ಯಕ್ಕೆ ಅವರ ಸೇವೆ ಅಲಭ್ಯವಾಗಿದೆ. ಇದು ತಂಡವನ್ನು ತುಸು ಬಾಧಿಸುವ ಸಾಧ್ಯತೆ ಇದೆ. ಆದಾಗ್ಯೂ ಮೊದಲೆರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ ರಾಬಿನ್ ಉತ್ತಪ್ಪ ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವುದು ಆಶಾದಾಯಕವಾಗಿದೆ. ಆದರೆ, ಮಯಾಂಕ್ ಅಗರ್ವಾಲ್ ಸ್ಥಿರ ಪ್ರದರ್ಶನದ ಬರ ಎದುರಿಸುತ್ತಿದ್ದು, ಎಚ್ಚರಿಕೆಯ ಆಟವಾಡಬೇಕಿದೆ. ಇನ್ನು ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ದೆಹಲಿ ಮತ್ತು ಅಸ್ಸಾಂ ವಿರುದ್ಧದ ಪಂದ್ಯದಿಂದ ವಂಚಿತವಾಗಿದ್ದ ನಾಯಕ ವಿನಯ್ ಕುಮಾರ್ ತಂಡಕ್ಕೆ ಸೇರ್ಪಡೆಯಾಗಿರುವುದು ಬೌಲಿಂಗ್ ವಿಭಾಗದ ಬಲ ಹೆಚ್ಚಿಸಿದೆ.

ತಂಡಗಳು

ಕರ್ನಾಟಕ

ವಿನಯ್ ಕುಮಾರ್ (ನಾಯಕ), ಆರ್. ಸಮರ್ಥ್, ಮಯಾಂಕ್ ಅಗರ್ವಾಲ್, ರಾಬಿನ್ ಉತ್ತಪ್ಪ, ಸಿ.ಎಂ. ಗೌತಮ್ (ಉಪನಾಯಕ), ಕೌನೇನ್ ಅಬ್ಬಾಸ್, ಸ್ಟುವರ್ಟ್ ಬಿನ್ನಿ, ಎಸ್. ಅರವಿಂದ್, ರೋನಿತ್ ಮೋರೆ, ಅಬ್ರಾರ್ ಕಾಜಿ, ಅರ್ಜುನ್ ಹೊಯ್ಸಳ, ಪವನ್ ದೇಶಪಾಂಡೆ, ಕೆ. ಗೌತಮ್, ಶ್ರೇಯಸ್ ಗೋಪಾಲ್.

ವಿದರ್ಭ

ಐಜ್ ಜಲ್ (ನಾಯಕ), ಆದಿತ್ಯ ಶನ್ವಾರೆ, ಗಣೇಶ್ ಸತೀಶ್, ರವಿ ಜಾಂಗಿದ್, ರಜನೀಶ್ ಗುರ್ಬಾನಿ, ಅಕ್ಷಯ್ ಕರ್ನೇವಾರ್, ಅಕ್ಷಯ್ ಕೊಲ್ಹಾರ್, ಲಲಿತ್ ಯಾದವ್, ಸಂಜಯ್ ರಾಮಸ್ವಾಮಿ, ಆದಿತ್ಯ ಸರ್ವಾತೆ, ಜಿತೇಶ್ ಶರ್ಮಾ, ಶಲಭ್ ಶ್ರೀವಾಸ್ವವ್, ರವಿಕುಮಾರ್ ಠಾಕೂರ್, ಶ್ರೀಕಾಂತ್ ವಾಘ್ ಮತ್ತು ಅಕ್ಷಯ್ ವಖಾರೆ.

ಪಂದ್ಯ ಆರಂಭ: ಬೆಳಿಗ್ಗೆ 9.30