ದೆಹಲಿ ಇನ್ನೂ 372 ರನ್'ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯಲ್ಲಿದ್ದು, ಕೊನೆಯ ದಿನದಂದು ಅಷ್ಟೂ ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಗಳಿಸುವ ಸಾಧ್ಯತೆ ಕಡಿಮೆಯೇ. ಪಂದ್ಯ ಡ್ರಾ ಆಗುವುದಾದರೂ ಕರ್ನಾಟಕಕ್ಕೆ ಅಮೂಲ್ಯ 3 ಅಂಕಗಳು ಪ್ರಾಪ್ತವಾಗಲಿದೆ. ದೆಹಲಿ ತಂಡ 1 ಪಾಯಿಂಟ್'ಗೆ ತೃಪ್ತಿಪಡಬೇಕಾಗುತ್ತದೆ.

ನೆಲಮಂಗಲ(ನ. 11): ರಣಜಿ ಟ್ರೋಫಿ ಪಂದ್ಯದಲ್ಲಿ ಸತತ ನಾಲ್ಕನೇ ಗೆಲುವಿಗೆ ಕರ್ನಾಟಕ ನಡೆಸುತ್ತಿರುವ ಪ್ರಯತ್ನಕ್ಕೆ ದೆಹಲಿ ಬ್ರೇಕ್ ಹಾಕುತ್ತಿದೆ. ರಣಜಿ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕದ 649 ರನ್'ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ದೆಹಲಿ ಮೂರನೇ ದಿನಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ. ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ ಇದ್ದು ಡ್ರಾ ಆಗುವುದು ಖಚಿತವಾಗಿದೆ. ನಿನ್ನೆ ವಿಕೆಟ್ ನಷ್ಟವಿಲ್ಲದೇ 20 ರನ್ ಗಳಿಸಿದ್ದ ದೆಹಲಿ ಇಂದು ಉನ್ಮುಕ್ತ್ ಚಾಂದ್ ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆದರೆ, ಗೌತಮ್ ಗಂಭೀರ್ ಮತ್ತು ಧ್ರುವ್ ಶೋರೇ 2ನೇ ವಿಕೆಟ್'ಗೆ 110 ರನ್ ಜೊತೆಯಾಟ ನೀಡಿ ಚೇತರಿಕೆ ಕೊಟ್ಟರು. ಶೋರೇ 64 ರನ್ ಗಳಿಸಿದರು. ಆ ನಂತರ ಬಂದ ನಿತೀಶ್ ರಾಣಾ ಕೇವಲ 9 ರನ್'ಗೆ ಔಟಾದರು. ಬಳಿಕ ಗಂಭೀರ್'ರೊಂದಿಗೆಗೆ ನಾಯಕ ರಿಶಬ್ ಪಂತ್ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಇವರಿಬ್ಬರು 4ನೇ ವಿಕೆಟ್'ಗೆ 83 ರನ್ ಜೊತೆಯಾಟ ನೀಡಿದರು. ಪಂತ್ 41 ರನ್'ಗೆ ಔಟಾದರು. ಇದೇ ವೇಳೆ ಗೌತಮ್ ಗಂಭೀರ್ 41ನೇ ಫಸ್ಟ್ ಕ್ಲಾಸ್ ಶತಕ ಭಾರಿಸಿದ್ದು ವಿಶೇಷ. 3ನೇ ದಿನದಾಟ ಅಂತ್ಯಗೊಂಡಾಗ ಗಂಭೀರ್ ಅಜೇಯ 135 ಹಾಗೂ ಮಿಲಿಂದ್ ಕುಮಾರ್ ಅಜೇಯ 10 ರನ್'ಗಳೊಂದಿಗೆ ಕ್ರೀಸ್'ನಲ್ಲಿದ್ದರು.

ದೆಹಲಿ ಇನ್ನೂ 372 ರನ್'ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯಲ್ಲಿದ್ದು, ಕೊನೆಯ ದಿನದಂದು ಅಷ್ಟೂ ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಗಳಿಸುವ ಸಾಧ್ಯತೆ ಕಡಿಮೆಯೇ. ಪಂದ್ಯ ಡ್ರಾ ಆಗುವುದಾದರೂ ಕರ್ನಾಟಕಕ್ಕೆ ಅಮೂಲ್ಯ 3 ಅಂಕಗಳು ಪ್ರಾಪ್ತವಾಗಲಿದೆ. ದೆಹಲಿ ತಂಡ 1 ಪಾಯಿಂಟ್'ಗೆ ತೃಪ್ತಿಪಡಬೇಕಾಗುತ್ತದೆ. ಈಗಾಗಲೇ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವ ಸಾಧ್ಯತೆ ಇದೆ.

ಸ್ಕೋರು ವಿವರ(3ನೇ ದಿನಾಂತ್ಯಕ್ಕೆ):

ಕರ್ನಾಟಕ ಮೊದಲ ಇನ್ನಿಂಗ್ಸ್ 172.2 ಓವರ್ 649 ರನ್ ಆಲೌಟ್

ದೆಹಲಿ ಮೊದಲ ಇನ್ನಿಂಗ್ಸ್ 84 ಓವರ್ 277/4
(ಗೌತಮ್ ಗಂಭೀರ್ ಅಜೇಯ 135, ಧ್ರುವ್ ಶೋರೀ 64, ರಿಶಬ್ ಪಂತ್ 41, ಉನ್ಮುಕ್ತ್ ಚಾಂದ್ 16 ರನ್ - ಸ್ಟುವರ್ಟ್ ಬಿನ್ನಿ 39/2)