ಪ್ರೊ ಕಬಡ್ಡಿ ಲೀಗ್‌'ನಲ್ಲಿ ದೇಸಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿ ಆವೃತ್ತಿಯಲ್ಲೂ ಹೊಸ ಹೊಸ ಆಟಗಾರರು ಮಿಂಚು ಹರಿಸುತ್ತಲಿದ್ದಾರೆ. ಆದರೆ, ಭಾರತೀಯರ ಸಂಪೂರ್ಣ ಪ್ರಾಬಲ್ಯದ ನಡುವೆ ತಮ್ಮದೇ ವಿಭಿನ್ನ ಶೈಲಿಯ ಡಿಫೆನ್ಸ್ ಮೂಲಕ ಪ್ರೊ ಕಬಡ್ಡಿಯಲ್ಲಿ ಹೆಸರು ಮಾಡಿರುವ ವಿದೇಶಿ ಆಟಗಾರ ಇರಾನ್‌'ನ ಫಜಲ್ ಅತ್ರಚಾಲಿ.
ಸಂದರ್ಶನ:ಸ್ಪಂದನ್ ಕಣಿಯಾರ್, ಅಹಮದಾಬಾದ್
ಪ್ರೊ ಕಬಡ್ಡಿ ಲೀಗ್'ನಲ್ಲಿ ದೇಸಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿ ಆವೃತ್ತಿಯಲ್ಲೂ ಹೊಸ ಹೊಸ ಆಟಗಾರರು ಮಿಂಚು ಹರಿಸುತ್ತಲಿದ್ದಾರೆ. ಆದರೆ, ಭಾರತೀಯರ ಸಂಪೂರ್ಣ ಪ್ರಾಬಲ್ಯದ ನಡುವೆ ತಮ್ಮದೇ ವಿಭಿನ್ನ ಶೈಲಿಯ ಡಿಫೆನ್ಸ್ ಮೂಲಕ ಪ್ರೊ ಕಬಡ್ಡಿಯಲ್ಲಿ ಹೆಸರು ಮಾಡಿರುವ ವಿದೇಶಿ ಆಟಗಾರ ಇರಾನ್'ನ ಫಜಲ್ ಅತ್ರಚಾಲಿ.
ಪ್ರೊ ಕಬಡ್ಡಿಯಲ್ಲಿ ಅವಕಾಶ ಎಷ್ಟು ಕಷ್ಟವಾಗಿತ್ತು? ‘ಭಾರತದಲ್ಲಿ ಎದುರಾದ ಸವಾಲುಗಳೇನು? ಫುಟ್ಬಾಲ್, ವಾಲಿಬಾಲ್, ಕುಸ್ತಿಗೆ ಹೆಸರುವಾಸಿಯಾಗಿರುವ ಇರಾನ್ ನಲ್ಲಿ ಕಬಡ್ಡಿ ಹುಟ್ಟಿಕೊಂಡಿದ್ದು ಹೇಗೆ? ತಾವು ಕಬಡ್ಡಿಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ‘ಭಾರತದಲ್ಲಿ ‘ಧರ್ಮವೆಂದೇ ಪರಿಗಣಿಸುವ ಕ್ರಿಕೆಟ್ ಬಗ್ಗೆ ತಮಗಿರುವ ಆಸಕ್ತಿ ಎಷ್ಟು? ಎಲ್ಲಕ್ಕಿಂತ ಹೆಚ್ಚಾಗಿ ‘ಭಾರತದ ಬಗ್ಗೆ ತಮಗೇಕೆ ಇಷ್ಟೊಂದು ಅಭಿಮಾನ ಎನ್ನುವುದರ ಬಗ್ಗೆ ಫಜಲ್ ‘ಕನ್ನಡಪ್ರಭ‘’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಪೂರ್ಣಪಾಠ ಇಂತಿದೆ.
ನೀವು ಕಬಡ್ಡಿ ಆಯ್ಕೆ ಮಾಡಿಕೊಂಡಿದ್ದೇಕೆ?
ನಾನು ಮೊದಲು ಕುಸ್ತಿ, ಜೂಡೋ ಆಡುತ್ತಿದ್ದೆ. ನನಗೆ ಚೆಂಡಿನಿಂದ ಆಡುವ ಕ್ರೀಡೆ ಇಷ್ಟವಿಲ್ಲ. ಎದುರಾಳಿಯೊಂದಿಗೆ ಕೈಕೈ ಮಿಲಾಯಿಸಿ ಹೋರಾಡುವುದು ನನಗಿಷ್ಟ. ಅದಕ್ಕಾಗೇ ನಾನು ಫುಟ್ಬಾಲ್, ವಾಲಿಬಾಲ್ ಕಡೆಗೆ ಆಸಕ್ತಿ ತೋರಲೇ ಇಲ್ಲ. ರಾಷ್ಟ್ರೀಯ ಮಟ್ಟದ ಕುಸ್ತಿ, ಜೂಡೋದಲ್ಲಿ ಪದಕ ಸಹ ಗೆದ್ದಿದ್ದರೂ ಕಬಡ್ಡಿ ಕಡೆಗೆ ಮನ ವಾಲಿತು. 8-10 ವರ್ಷಗಳ ಹಿಂದೆ ಕಬಡ್ಡಿ ಫೆಡರೇಷನ್'ನವರು ನನ್ನ ಹಳ್ಳಿಗೆ ಬಂದು ಕುಸ್ತಿ ಆಡುವವರನ್ನು ಕಬಡ್ಡಿಗೆ ಆಯ್ಕೆ ಮಾಡಿದರು. ಕುಸ್ತಿಯಲ್ಲೂ ಆ್ಯಂಕಲ್ ಹೋಲ್ಡ್, ಥೈ ಹೋಲ್ಡ್, ಲಿಫ್ಟ್ ಇದೆಲ್ಲವೂ ಇರುವುದರಿಂದ ಕಬಡ್ಡಿ ನನಗೆ ಕಷ್ಟವಾಗಲಿಲ್ಲ. ಮೊದಲ ಬಾರಿಗೆ ನನ್ನ ಆಟ ನೋಡಿದಾಗ ಕೋಚ್'ಗೇ ಆಶ್ಚರ್ಯವಾಗಿತ್ತು. ನಿಜ ಹೇಳು, ನೀನು ಯಾವತ್ತೂ ಕಬಡ್ಡಿ ಆಡಿಯೇ ಇಲ್ಲವೇ ಎಂದು ಕೇಳಿದ್ದರು.
ಪ್ರೊ ಕಬಡ್ಡಿ ಅನುಭವದ ಬಗ್ಗೆ?
ನಾನು ಮೊದಲ ಬಾರಿಗೆ ಪ್ರೊ ಕಬಡ್ಡಿಗೆ ಬಂದಾಗ ನನಗೆ ಇಂಗ್ಲಿಷ್, ಹಿಂದಿ ಯಾವುದೂ ಬರುತ್ತಿರಲಿಲ್ಲ. ಮೊದಲ ಆವೃತ್ತಿ ವೇಳೆ ಬಹಳ ಕಷ್ಟವಾಯಿತು. ಮುಂಬೈ ತಂಡಕ್ಕೆ ಬಂದ ಮೇಲೆ ನನಗೆ ಶಬ್ಬೀರ್ ಬಾಪು (ಸಹ ಆಟಗಾರ) ಎಲ್ಲದ್ದಕ್ಕೂ ಸಹಾಯ ಮಾಡಿದರು. ಅವರಿಂದ ಸಾಕಷ್ಟು ಕಲಿತೆ. ಈ ಆವೃತ್ತಿಗೆ ಬರುವ ಮೊದಲು 10 ದಿನಗಳ ಕಾಲ ಇಂಗ್ಲಿಷ್ ತರಬೇತಿ ಪಡೆದಿದ್ದೆ. ಪಂದ್ಯಾವಳಿ ಮುಗಿದ ಬಳಿಕ ಮತ್ತೆ ಕ್ಲಾಸ್'ಗೆ ಹೋಗುತ್ತೇನೆ. ಇರಾನ್'ನಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ನಾನ್ಯಾರೆಂದೇ ಗೊತ್ತಿಲ್ಲ. ಆದರೆ ಭಾರತದಲ್ಲಿ ಇಷ್ಟೊಂದು ಅಭಿಮಾನ, ಪ್ರೀತಿ ಸಿಗುತ್ತಿದೆ.
100 ಟ್ಯಾಕಲ್ ಅಂಕ ಗಳಿಸಿದ ಮೊದಲ ವಿದೇಶಿಗ ಈ ಬಗ್ಗೆ?
ಮೊದಲ ಆವೃತ್ತಿಯಲ್ಲಿ ನನಗೆ ಆಡುವ ಅವಕಾಶವೇ ಸಿಗಲಿಲ್ಲ. 2ನೇ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡಿ 12 ಅಂಕ ಪಡೆದೆ. ನಾನು ಯು ಮುಂಬಾ ತಂಡದಲ್ಲಿ ಇದ್ದಿದ್ದರಿಂದ ಹೆಚ್ಚು ಅವಕಾಶವೇ ಸಿಗುತ್ತಿರಲಿಲ್ಲ. ತಂಡದಲ್ಲಿ ಖಾಯಂ ಸ್ಥಾನವಿರಲಿಲ್ಲ.
ಕಬಡ್ಡಿ ಆಡದಿರುವಾಗ ಏನು ಮಾಡುತ್ತೀರ?
ನಾನು ಇರಾನ್'ನ ಗೊರ್ಗಾನ್'ನವನು. ಆ ಪ್ರದೇಶದಲ್ಲಿ ಹೆಚ್ಚು ಕಾಡು, ಬೆಟ್ಟ-ಗುಡ್ಡಗಳಿವೆ. ಕಬಡ್ಡಿ ಇಲ್ಲದಿದ್ದಾಗ ನಾನು ಸ್ನೇಹಿತರೊಂದಿಗೆ ಕಾಡಿಗೆ ತೆರಳುತ್ತೇನೆ. ಅಲ್ಲೇ ಕೆಲ ದಿನಗಳ ಕಾಲ ವಾಸಿಸುತ್ತೇನೆ. ಬೆಟ್ಟ ಹತ್ತುವುದು ನನಗಿಷ್ಟ. ಪ್ರಕೃತಿಗೆ ಹತ್ತಿರವಾಗಿರುವುದು ಎಂದರೆ ನನಗೆ ಪ್ರೀತಿ.
ನಿಮ್ಮ ನೆಚ್ಚಿನ ಕಬಡ್ಡಿ ಆಟಗಾರ?
ರಾಕೇಶ್ ಕುಮಾರ್ ನನಗೆ ಅಚ್ಚುಮೆಚ್ಚು. ಚಿಕ್ಕವನಿದ್ದಾಗ ಅವರನ್ನುನೋಡಬೇಕು ಎಂಬುದು ಕನಸಾಗಿತ್ತು. 2010ರಲ್ಲಿ ಮೊದಲ ಬಾರಿಗೆ ಅವರನ್ನು ನೋಡಿದಾಗ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ಇಂದು ಅವರೊಂದಿಗೆ ಆಡುವ ಅವಕಾಶ ಸಿಕ್ಕಿದೆ.
ನೀವು ಜನಗಣಮನ ಕಲಿತಿದ್ದು ಹೇಗೆ..?
ಪ್ರತಿದಿನವೂ ಜನಗಣಮನ ಕೇಳುತ್ತಿದ್ದರಿಂದ ಅದು ನನ್ನ ಮನಸ್ಸಿನಲ್ಲಿ ಉಳಿದಿದೆ. ಜನಗಣಮನ ಹಾಡುವುದು ಎಂದರೆ ನನಗೆ ಬಹಳ ಇಷ್ಟ. ಈ ಬಾರಿ ಹೊಸ ಚರಣದ ಆರಂಭದ ದಿನ ಮಾತ್ರ ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಮೊದಲೆಲ್ಲ ಪ್ರತಿದಿನ ಹಾಡುತ್ತಿದ್ದರು. ಭಾರತದಲ್ಲಿ ಏನಿಲ್ಲಾ ಎಂದರೂ ವರ್ಷದಲ್ಲಿ ನಾಲ್ಕೈದು ತಿಂಗಳು ವಾಸಿಸುತ್ತಿದ್ದೇನೆ. ಹೀಗಾಗಿ ಇದು ನನ್ನ ಎರಡನೇ ತವರು.
ಇಲ್ಲಿ ನಿಮ್ಮ ಆಹಾರ ಪದ್ಧತಿ ಹೇಗಿದೆ?
ಇರಾನ್, ಭಾರತ ಎರಡೂ ದೇಶಗಳ ಆಹಾರದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಪ್ರತಿದಿನ ಚಿಕನ್, ಅನ್ನ, ಹಾಲು ಸೇವಿಸುತ್ತೇನೆ. ನನ್ನ ಪ್ರಕಾರ ಆಟಗಾರ ತನ್ನ ದೇಹದ ಬಗ್ಗೆ ಅತಿಯಾದ ಕಾಳಜಿ ಇಟ್ಟುಕೊಳ್ಳಬಾರದು. ಆಗ ಗಾಯವಾಗುವ ಸಾಧ್ಯತೆ ಹೆಚ್ಚು.
ಭಾರತದಲ್ಲಿ ಕಬ್ಬಡಿ ಭವಿಷ್ಯ ಏನು?
ಮೊದಲ ಆವೃತ್ತಿಯಲ್ಲಿ ಅತಿಹೆಚ್ಚು ಮೊತ್ತ ಪಡೆದ ರಾಕೇಶ್'ಗೆ ಸಿಕ್ಕಿದ್ದು 12 ಲಕ್ಷ. ಈ ವರ್ಷ ನಿತಿನ್'ಗೆ 93 ಲಕ್ಷ ಸಿಕ್ಕಿದೆ. ವರ್ಷದಿಂದ ವರ್ಷಕ್ಕೆ ಕ್ರೀಡೆ ಬೆಳೆಯುತ್ತಿದೆ. ಆದಷ್ಟು ಬೇಗ ಕ್ರಿಕೆಟ್'ನಷ್ಟು ಜನಪ್ರಿಯತೆಗಳಿಸಲಿದೆ. ಕ್ರಿಕೆಟ್ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಆದರೆ ಯಾವಾಗ ಟಿವಿ ಹಾಕಿದರೂ ವಿರಾಟ್ ಕೊಹ್ಲಿಯೇ ಬರುತ್ತಿರುತ್ತಾರೆ. ಹೀಗಾಗಿ ಅವರೆಂದರೆ ನನಗೆ ಇಷ್ಟ. ಅವರ ಗೆಳತಿ ಅನುಷ್ಕಾ ಶರ್ಮಾ ಬಗ್ಗೆಯೂ ಸ್ವಲ್ಪ ತಿಳಿದುಕೊಂಡಿದ್ದೇನೆ.
