ಅಹಮದಾಬಾದ್‌(ಅ.07): ಸತತ ಏಳನೇ ವಿಶ್ವಕಪ್‌ ಕಬಡ್ಡಿ ಚಾಂಪಿಯನ್ನರಾಗಬೇಕೆಂಬ ತವಕದಲ್ಲಿರುವ ಆತಿಥೇಯ ಭಾರತ, ಶುಕ್ರವಾರ ಆರಂಭವಾದ ಏಳನೇ ವಿಶ್ವಕಪ್‌ ಕಬಡ್ಡಿ ಪಂದ್ಯಾವಳಿಯಲ್ಲಿ ಸೋಲಿನ ಆಘಾತ ಅನುಭವಿಸಿತು.

ಪ್ರಬಲ ಪೈಪೋಟಿ ನೀಡಿದ ದ.ಕೊರಿಯಾ ವಿರುದ್ಧ 32-34 ಅಂಕಗಳಿಂದ ಸೋಲನುಭವಿಸಿದ ಭಾರತ, ಕೇವಲ ಎರಡು ಪಾಯಿಂಟ್ಸ್‌ಗಳ ಹಿನ್ನಡೆಯಿಂದಾಗಿ ಗೆಲುವು ಬಿಟ್ಟುಕೊಟ್ಟಿತು. ಕಿಕ್ಕಿರಿದು ನೆರೆದಿದ್ದ ಇಲ್ಲಿನ ಟ್ರಾನ್ಸ್‌ ಸ್ಟೇಡಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಆರಂಭದಿಂದಲೂ ಪ್ರಭಾವಿ ಆಟದ ಮೂಲಕ ಗಮನಸೆಳೆದರು. ಆದರೆ ಕೊನೆಯ ಕ್ಷಣಗಳಲ್ಲಿ ಎಚ್ಚರ ತಪ್ಪಿದ್ದರಿಂದ ಭಾರೀ ಬೆಲೆ ತೆತ್ತರು.

ಪಂದ್ಯದಲ್ಲಿ ಟಾಸ್‌ ಗೆದ್ದ ಕೊರಿಯಾ ಕೋರ್ಟ್‌ ಆಯ್ಕೆ ಮಾಡಿಕೊಂಡು, ಭಾರತವನ್ನು ರೈಡಿಂಗ್‌ಗೆ ಆಹ್ವಾನಿಸಿತು. ಅನೂಪ್‌ ಕುಮಾರ್‌ ಅವರನ್ನು ಹಿಡಿತಕ್ಕೆ ಪಡೆದ ಕೊರಿಯಾ ಅಂಕದ ಖಾತೆ ತೆರೆಯಿತು. ನಂತರದ ಕ್ಷಣದಲ್ಲಿ ಕೊರಿಯಾದ ಜಾನ್‌ ಕುನ್‌ ಲೀ ಅವರನ್ನು ಅದ್ಭುತವಾಗಿ ಕ್ಯಾಚ್‌ ಮಾಡಿದ ಧರ್ಮರಾಜ್‌ ಚೇರ್ಲಾಥಾನ್‌ ಅಂಕ ಗಳಿಕೆಯಲ್ಲಿ 1-1ರಿಂದ ಸಮಬಲ ಸಾಧಿಸಿದರು. ಆದರೆ, 5 ನಿಮಿಷಗಳ ಆಟದಲ್ಲಿ ಭಾರತ 4-2 ಅಂಕಗಳಿಂದ ಕೊರಿಯಾವನ್ನು ಹಿಂದಿಕ್ಕಿತು. ಅಲ್ಲಿಂದಾಚೆಗಿನ ಆಟ ಅತೀವ ರೋಚಕತೆಗೆ ಎಡೆಮಾಡಿಕೊಟ್ಟಿತು. ಕೊರಿಯಾ ತಂಡ ರಕ್ಷಣೆಯಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಅಂಕಗಳಿಕೆÜಗೆ ಹೆಚ್ಚಿನ ಒತ್ತು ನೀಡಿತು. ಈ ವೇಳೆ ಮತ್ತಷ್ಟುಪ್ರಭಾವಿ ಆಟವಾಡಿದ ಭಾರತ, ಕೊರಿಯಾವನ್ನು ಆಲೌಟ್‌ ಮಾಡಿ ಲೋನಾ ಅಂಕದೊಂದಿಗೆ 12-9ರಿಂದ ಮುನ್ನಡೆ ಸಾಧಿಸಿತು. ಇದೇ ಅಂತರ ಕಾಯ್ದುಕೊಂಡ ಭಾರತ ಮೊದಲಾರ್ಧದ ಅಂತ್ಯಕ್ಕೆ 18-13ರಿಂದ ಮುನ್ನಡೆ ಪಡೆಯಿತು.

ಇನ್ನು ದ್ವಿತೀಯಾರ್ಧದ ಆಟದಲ್ಲಿ ಅಂಕಗಳಿಕೆಗೆ ಮಹತ್ವ ನೀಡಿದ ಅನೂಪ್‌ ಬಳಗಕ್ಕೆ ಕೊರಿಯಾ ಆಟಗಾರರು ಶಾಕ್‌ ನೀಡಿದರು. ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕೊರಿಯಾ ವೇಗವಾಗಿ ಅಂಕ ಕಲೆಹಾಕಿತು. ಇದರ ಪರಿಣಾಮವಾಗಿಯೇ ಮುಕ್ತಾಯಕ್ಕೆ ಇನ್ನು 3 ನಿಮಿಷಗಳು ಬಾಕಿ ಇರುವಾಗ ಅನೂಪ್‌ ಅವರನ್ನು ಹಿಡಿತಕ್ಕೆ ಪಡೆದು ಭಾರತವನ್ನು ಆಲೌಟ್‌ಗೆ ಗುರಿಪಡಿಸಿ 26-29ರಿಂದ ಸಮೀಪ ಧಾವಿಸಿತು. ಕೊನೆ ಕ್ಷಣಗಳ ಆಟದಲ್ಲಿ ಕುನ್‌ ಲೀ ಸೂಪರ್‌ ರೈಡಿಂಗ್‌ ಮೂಲಕ ಕೊರಿಯಾ 33-31ರಿಂದ ಮುನ್ನಡೆ ಪಡೆಯಿತು. ಅಂತಿಮವಾಗಿ 2 ಅಂಕಗಳ ಅಂತರದಿಂದ ಕೊರಿಯಾ ಪಂದ್ಯ ಜಯಿಸುವಲ್ಲಿ ಯಶಸ್ವಿಯಾಯಿತು.