24 ವರ್ಷದ ಶ್ರೀಕಾಂತ್ ಇತ್ತೀಚೆಗಷ್ಟೇ ಮುಕ್ತಾಯವಾದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್ ಫೈನಲ್'ನಲ್ಲಿ ಹೆಚ್.ಎಸ್. ಪ್ರಣಯ್ ವಿರುದ್ಧ ಮುಗ್ಗರಿಸಿದ್ದರು. 2014ರ ಚೀನಾ ಓಪನ್'ನಲ್ಲಿ ಲಿನ್ ಡ್ಯಾನ್ ಮಣಿಸಿ ಚಾಂಪಿಯನ್ ಆಗಿದ್ದ ಶ್ರೀಕಾಂತ್, ನಾನು ಶ್ರೇಯಾಂಕದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ನವದೆಹಲಿ(ನ.12): ಭಾರತದ ತಾರಾ ಶಟ್ಲರ್ ಕಿದಾಂಬಿ ಶ್ರೀಕಾಂತ್, ನ.14ರಿಂದ 19ರ ವರೆಗೆ ನಡೆಯಲಿರುವ ಚೀನಾ ಓಪನ್ ಸೂಪರ್ ಸೀರೀಸ್'ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿ ವೇಳೆ ಸಣ್ಣ ಪ್ರಮಾಣದ ಗಾಯಕ್ಕೆ ತುತ್ತಾಗಿದ್ದ ಶ್ರೀಕಾಂತ್, ಒಂದು ವಾರ ವಿಶ್ರಾಂತಿ ಪಡೆಯಲು ಬಯಸಿದ್ದಾರೆ. ‘ಕಾಲಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ. ಹೀಗಾಗಿ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಚೀನಾ ಓಪನ್'ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಹಾಂಕಾಂಗ್ ಓಪನ್'ನಲ್ಲಿ ಆಟಕ್ಕೆ ಮರಳಲಿದ್ದೇನೆ’ ಎಂದು ಶ್ರೀಕಾಂತ್ ಹೇಳಿದ್ದಾರೆ.
ಇದೇ ವೇಳೆ, ಶ್ರೀಕಾಂತ್'ಗೆ ಗಾಯವಾಗಲು ರಾಷ್ಟ್ರೀಯ ಚಾಂಪಿಯನ್'ಶಿಪ್ ಕಾರಣ ಎನ್ನುವುದು ತಪ್ಪು. ಎಲ್ಲಾ ಹಿರಿಯ ಆಟಗಾರರನ್ನು ಕೇಳಿಯೇ ವೇಳಾಪಟ್ಟಿ ಅಂತಿಮಗೊಳಿಸಿದ್ದೆವು. ಒಂದು ವಾರದಲ್ಲಿ ಶ್ರೀಕಾಂತ್ ಅಂಕಣಕ್ಕೆ ಮರಳಲಿದ್ದಾರೆ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ.
ನಂ.1ಗೇರುವ ಅವಕಾಶ: ಶ್ರೀಕಾಂತ್ ಸದ್ಯ ವಿಶ್ವ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಡೆನ್ಮಾರ್ಕ್ ವಿಕ್ಟರ್ ಅಕ್ಸೆಲ್ಸನ್'ಗೂ ಶ್ರೀಕಾಂತ್'ಗೂ 4527 ಅಂಕಗಳ ವ್ಯತ್ಯಾಸವಿದೆ. ನವೆಂಬರ್ 21ರಿಂದ ಆರಂಭಗೊಳ್ಳಲಿರುವ ಹಾಂಕಾಂಗ್ ಸೂಪರ್ ಸೀರೀಸ್'ನಲ್ಲಿ ವಿಕ್ಟರ್ ಆರಂಭಿಕ ಸುತ್ತುಗಳಲ್ಲೇ ಹೊರಬಿದ್ದು, ಶ್ರೀಕಾಂತ್ ಪ್ರಶಸ್ತಿ ಗೆದ್ದರೆ ಅಗ್ರಸ್ಥಾನಕ್ಕೇರುವ ಅವಕಾಶ ದೊರೆಯಲಿದೆ.