ಇನ್ನು ಬಿಸಿಸಿಐನ ಪರಿವೀಕ್ಷಕ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ನ್ಯಾ. ಮುಕುಲ್ ಮುದ್ಗಲ್ ಈಗಾಗಲೇ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಪರಿವೀಕ್ಷಕರಾಗಿ ಸಮರ್ಥ ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡು ನ್ಯಾಯಾಲಯ ಅವರ ನೇಮಕ ಮಾಡುವ ಸಾಧ್ಯತೆ ಇದೆ.

ನವದೆಹಲಿ(ಜ.04): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಪರಿವೀಕ್ಷಕರನ್ನು ನೇಮಿಸುವ ಸಾಧ್ಯತೆ ಹೆಚ್ಚಿದ್ದು, ಈ ಸ್ಥಾನಕ್ಕೆ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರದೆ, ನ್ಯಾಯಾಲಯದ ಆದೇಶವನ್ನು ಪದೇ ಪದೇ ಉಲ್ಲಂಘಿಸುತ್ತಾ ಬರುತ್ತಿದ್ದ ಹಿನ್ನೆಲೆಯಲ್ಲಿ ಬಿಸಿಸಿಐನ ಪದಾಧಿಕಾರಿಗಳನ್ನು ವಜಾಗೊಳಿಸುವಂತೆ ಲೋಧಾ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ ಕಳೆದ ನವೆಂಬರ್‌ನಲ್ಲಿ ಶಿಫಾರಸು ಮಾಡಿತ್ತು. ಅದರನ್ವಯ ಇತ್ತೀಚೆಗಷ್ಟೇ ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಕ್ರಮವಾಗಿ ಅಧ್ಯಕ್ಷ ಹಾಗೂ ಕಾರ್ಯ‌್ಯದರ್ಶಿ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

ಇನ್ನು ಬಿಸಿಸಿಐನ ಪರಿವೀಕ್ಷಕ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ನ್ಯಾ. ಮುಕುಲ್ ಮುದ್ಗಲ್ ಈಗಾಗಲೇ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಪರಿವೀಕ್ಷಕರಾಗಿ ಸಮರ್ಥ ಸೇವೆ ಸಲ್ಲಿಸುತ್ತಿರುವುದನ್ನು ಮನಗಂಡು ನ್ಯಾಯಾಲಯ ಅವರ ನೇಮಕ ಮಾಡುವ ಸಾಧ್ಯತೆ ಇದೆ.

ಐಸಿಸಿ ವಿಶ್ವ ಟಿ20 ಹಾಗೂ ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ವೇಳೆಯೂ ಮುದ್ಗಲ್ ಪರಿವೀಕ್ಷಕರಾಗಿದ್ದರು. ಇನ್ನು 2015ರ ಡಿಸೆಂಬರ್‌'ನಲ್ಲಿ ನಡೆದಿದ್ದ ಭಾರತ ಮತ್ತು ದ.ಆಫ್ರಿಕಾ ತಂಡದ ಕೋಟ್ಲಾ ಟೆಸ್ಟ್‌'ನ ಮೇಲ್ವಿಚಾರಣೆಯನ್ನೂ ದೆಹಲಿ ನ್ಯಾಯಾಲಯ ಇದೇ ಮುದ್ಗಲ್ ಹೆಗಲಿಗೆ ಹೊರಿಸಿತ್ತು. ಈ ವೇಳೆ ಡಿಡಿಸಿಎಯಲ್ಲಿನ ಹಲವಾರು ಅವ್ಯವಹಾರಗಳನ್ನು ಮನಗಂಡಿದ್ದ ಮುದ್ಗಲ್, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಇವಿಷ್ಟಲ್ಲದೆ, 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಕುರಿತ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯ ಇವರ ನೇತೃತ್ವದಲ್ಲೇ ಸಮಿತಿಯೊಂದನ್ನು ರೂಪಿಸಿತ್ತಲ್ಲದೆ, ಮುದ್ಗಲ್ ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಹೀಗಾಗಿ ಕ್ರಿಕೆಟ್ ವಲಯದಲ್ಲಿ ಮುದ್ಗಲ್ ಅವರಿಗೆ ಅಪಾರ ಗೌರವವಿದೆ.