ಭಾರತ ತಂಡ ಲೀಗ್ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಪಡೆದಿದ್ದು 9 ಅಂಕಗಳೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.

ಲಖನೌ(ಡಿ.12): ಯುವ ಮುನ್ಪಡೆ ಆಟಗಾರ ಮಂದೀಪ್ ಸಿಂಗ್ ಪಂದ್ಯ ಮುಕ್ತಾಯಕ್ಕೆ ಕೆಲ ನಿಮಿಷಗಳಿದ್ದ ವೇಳೆಯಲ್ಲಿ ಗಳಿಸಿದ ಅತ್ಯದ್ಭುತ ಗೋಲಿನ ನೆರವಿನಿಂದ ಭಾರತ ತಂಡ, ಕಿರಿಯರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಮೇಜರ್ ಧ್ಯಾನ್‌'ಚಂದ್ ಆ್ಯಸ್ಟ್ರೋಟರ್ಫ್ ಕ್ರೀಡಾಂಗಣದಲ್ಲಿ ನಡೆದ ‘ಡಿ’ ಗುಂಪಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ 2-1 ಗೋಲುಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಪಡೆದಿದೆ. ಭಾರತದ ಪರ ಹರ್ಜೀತ್ ಸಿಂಗ್ 11ನೇ ನಿ., ಮಂದೀಪ್ ಸಿಂಗ್ 55ನೇ ನಿಮಿಷದಲ್ಲಿ ಗೋಲುಗಳಿಸಿದರು. ಇತ್ತ ದಕ್ಷಿಣ ಆಫ್ರಿಕಾ ಪರ ಕೈಲ್ ಲಯನ್ ಕಾಚೆಟ್ 28ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಭಾರತ ತಂಡ ಲೀಗ್ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಪಡೆದಿದ್ದು 9 ಅಂಕಗಳೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ‘ಸಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿರುವ ಸ್ಪೇನ್ ಎದುರು ಗುರುವಾರ ನಡೆಯುವ ಎಂಟರಘಟ್ಟದ ಪಂದ್ಯದಲ್ಲಿ ಆತಿಥೇಯ ಭಾರತ ಸೆಣಸಲಿದೆ.