ಕೊನೆ ಎಸೆತದಲ್ಲಿ ಜಡೇಜಾ ಮತ್ತೊಮ್ಮೆ ತಮ್ಮ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಕೃನಾಲ್‌'ರನ್ನು ರನೌಟ್ ಮಾಡಿ ಸೂಪರ್ ಓವರ್‌ಗೆ ಕಾರಣರಾದರು.

ರಾಜ್‌'ಕೋಟ್(ಏ.30): ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು 10ನೇ ಆವೃತ್ತಿಯ ಐಪಿಎಲ್'ನಲ್ಲಿ ಮೊದಲ ಸೂಪರ್ ಓವರ್‌ಗೆ ಸಾಕ್ಷಿಯಾಯಿತು.

Add Asianetnews Kannada as a Preferred SourcegooglePreferred

ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸ್ಕೋರ್ ಟೈ ಆದ ಕಾರಣ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಜೇಮ್ಸ್ ಫಾಲ್ಕನರ್ ಬೌಲಿಂಗ್'ನಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದರೆ, ಜಸ್‌ಪ್ರೀತ್ ಬೂಮ್ರಾ ದಾಳಿಗೆ ತತ್ತರಿಸಿದ ಗುಜರಾತ್ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌'ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮುಂಬೈ 20 ಓವರ್‌'ಗಳಲ್ಲಿ 153 ರನ್ ಗಳಿಸಿ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನತ್ತಿದ ಮುಂಬೈಗೆ ಪಾರ್ಥೀವ್ ಪಟೇಲ್ (70) ಆಟ ಸುಲಭ ಗೆಲುವಿನ ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕ ದಿಢೀರ್ ಕುಸಿದ ಕಾರಣ, ಕೈಯಲ್ಲಿದ್ದ ಪಂದ್ಯವನ್ನು ಮುಂಬೈ ತನ್ನದಾಗಿಸಿಕೊಳ್ಳಲು ಸಂಕಷ್ಟ ಎದುರಿಸಬೇಕಾಯಿತು.

ಕೊನೆ ಓವರ್‌'ನಲ್ಲಿ ಮುಂಬೈ ಗೆಲ್ಲಲು 12 ರನ್‌'ಗಳ ಅವಶ್ಯಕತೆ ಇತ್ತು. ಕೃನಾಲ್ ಪಾಂಡ್ಯ, ಪಠಾಣ್‌ ಎಸೆದ ಮೊದಲ ಎಸೆತವನ್ನ ಸಿಕ್ಸರ್‌'ಗಟ್ಟಿದರು. ಆದರೆ 2ನೇ ಎಸೆತದಲ್ಲಿ ಒಂಟಿ ರನ್ ಪಡೆದು ನಾನ್-ಸ್ಟ್ರೈಕರ್ ಬದಿಗೆ ತೆರಳಿದರು. 3ನೇ ಎಸೆತದಲ್ಲಿ ಜಡೇಜಾ ಮಾಡಿದ ಚುರುಕಿನ ಕ್ಷೇತ್ರರಕ್ಷಣೆಯಿಂದಾಗಿ ಬೂಮ್ರಾ ರನೌಟ್ ಆದರು. 4ನೇ ಎಸೆತದಲ್ಲಿ 2 ಹಾಗೂ 5ನೇ ಎಸೆತದಲ್ಲಿ ಕೃನಾಲ್ ಒಂದು ರನ್ ಪಡೆದರು. ಕೊನೆ ಎಸೆತದಲ್ಲಿ ಜಡೇಜಾ ಮತ್ತೊಮ್ಮೆ ತಮ್ಮ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಕೃನಾಲ್‌'ರನ್ನು ರನೌಟ್ ಮಾಡಿ ಸೂಪರ್ ಓವರ್‌ಗೆ ಕಾರಣರಾದರು.