ಜಪಾನ್ ಓಪನ್ : ಸಾಯಿ ಪ್ರಣೀತ್ ಶುಭಾರಂಭ
ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ಶುಭಾರಂಭ ಮಾಡಿದ್ದಾರೆ. ಬಿ. ಸಾಯಿ ಪ್ರಣೀತ್, ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ಜೋಡಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಟೋಕಿಯೋ(ಜು.24): ಭಾರತದ ಶಟ್ಲರ್ ಬಿ. ಸಾಯಿ ಪ್ರಣೀತ್, ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಸಾಯಿರಾಜ್ ಜೋಡಿ, ಇಲ್ಲಿ ಮಂಗಳವಾರದಿಂದ ಆರಂಭವಾಗಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಜಪಾನ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಮೇಲೆ ಕಣ್ಣಿಟ್ಟ ಸಿಂಧು
ಪುರುಷರ ಸಿಂಗಲ್ಸ್‌ನಲ್ಲಿ ಶ್ರೇಯಾಂಕ ರಹಿತ ಪ್ರಣೀತ್, ಜಪಾನ್‌ನ ಕೆಂಟೊ ನಿಶಿಮೊಟೊ ವಿರುದ್ಧ 21-17, 21-13 ಗೇಮ್ ಗಳಲ್ಲಿ ಗೆಲುವು ಸಾಧಿಸಿದರು ಪ್ರಣೀತ್, ಕೇವಲ 42 ನಿಮಿಷಗಳ ಆಟದಲ್ಲಿ ಜಪಾನ್ ಶಟ್ಲರ್ ರನ್ನು ಮಣಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ, ಜರ್ಮನಿಯ ಮಾರ್ವಿನ್ ಸೀಡಲ್, ಲಿಂಡಾ ಎಫ್ಲೆರ್ ಜೋಡಿ ಎದುರು 21-14, 21-19 ಗೇಮ್‌ಗಳಲ್ಲಿ ಜಯ ಪಡೆದು 2ನೇ ಸುತ್ತು ಪ್ರವೇಶಿಸಿದರು.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮಿತ್ ರೆಡ್ಡಿ ಜೋಡಿ, ಮಲೇಷ್ಯಾದ ಗೊಹ್ ಸ್ಜೆ ಫೀ ಮತ್ತು ನೂರ್ ಇಜುದ್ದೀನ್ ಜೋಡಿ ವಿರುದ್ಧ 12-21, 16-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಭಾರತದ ತಾರಾ ಶಟ್ಲರ್ ಗಳಾದ ಸಿಂಧು, ಕಿದಂಬಿ ಶ್ರೀಕಾಂತ್ ಬುಧವಾರ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆ.
ಹಿಂದೆ ಸರಿದ ಸೈನಾ: ಪಂದ್ಯ ಆರಂಭಕ್ಕೆ ಕೊನೆಯ ನಿಮಿಷಗಳಿದ್ದಾಗ ಸೈನಾ ನೆಹ್ವಾಲ್ ಹಿಂದೆ ಸರಿದರು. ಗಾಯದ ಸಮಸ್ಯೆ ಉಲ್ಬಣಿಸಿದ್ದರಿಂದ ಸೈನಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸೈನಾ ಹೇಳಿದ್ದಾರೆ.