ಚಿನ್ನ ಗೆದ್ದ ಭಾರತದ ಶೂಟರ್ ಅಪೂರ್ವಿ
ಭಾರತದ ಶೂಟರ್ ಅಪೂರ್ವಿ ಚಾಂಡೇಲಾ ಶೂಟಿಂಗ್’ನಲ್ಲಿ ಪದಕದ ಬೇಟೆ ಮುಂದುವರೆಸಿದ್ದಾರೆ. ಜರ್ಮನಿಯ ಮ್ಯೂನಿಚ್’ನಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆಯ ಆಯೋಜನೆಯ 3ನೇ ವಿಶ್ವಕಪ್ ರೈಫಲ್/ಪಿಸ್ತೂಲ್ ಸ್ಪರ್ಧೆಯ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.
ದೇಶದ ಪ್ರತಿಭಾನ್ವಿತ ಶೂಟರ್ ಅಪೂರ್ವಿ ಚಾಂಡೇಲಾ ಚಿನ್ನದ ಬೇಟೆ ಮುಂದುವರಿದಿದೆ. ಭಾನುವಾರ ಜರ್ಮನಿಯ ಮ್ಯೂನಿಚ್’ನಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆಯ ಆಯೋಜನೆಯ 3ನೇ ವಿಶ್ವಕಪ್ ರೈಫಲ್/ಪಿಸ್ತೂಲ್ ಸ್ಪರ್ಧೆಯ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಅಪೂರ್ವಿ ಅವರಿಗೆ ಇದು ವರ್ಷದ ಎರಡನೇ ಅಂತಾರಾಷ್ಟ್ರೀಯ ಚಿನ್ನದ ಬೇಟೆಯಾಗಿದೆ.
ಜೈಪುರ ಮೂಲದ ಅಪೂರ್ವಿ ಅಂತಿಮ ಸುತ್ತಿನಲ್ಲಿ ತಮಗೆ ಪೈಪೋಟಿ ನೀಡಿದ ಚೀನಾದ ವಾಂಗ್ ಲುಯೋ ಗಳಿಸಿದ ಅಂಕಕ್ಕಿಂತ ಜಾಸ್ತಿ, 251 ಅಂಕ ಸಂಪಾದಿಸಿ ಸ್ವರ್ಣ ಮುಡಿಗೇರಿಸಿಕೊಂಡರು. ವಾಂಗ್ 250.8 ಅಂಕಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. 229.4 ಅಂಕಗಳಿಸಿದ ಚೀನಾದ ಇನ್ನೊಬ್ಬಾಕೆ ಕ್ಸು ಹಾಂಗ್ ಕಂಚಿನ ಪದಕ ಗಳಿಸಿಕೊಂಡರು. ಕಳೆದ ಫೆಬ್ರುವರಿಯಲ್ಲಿ ಅಪೂರ್ವಿ ನವದೆಹಲಿಯಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್’ನಲ್ಲೇ ಚಿನ್ನ ಮುಡಿಗೇರಿಸಿಕೊಂಡಿದ್ದರು.
ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಶೂಟರ್ ಎಲ್ವೆನಿಲ್ ವಲಾರಿವನ್ ಕೂಡ ಫೈನಲ್ ಹಂತಕ್ಕೇರಿದ್ದರು. ಆದರೆ ಕೆಲವೇ ಅಂಕಗಳ ಅಂತರದಲ್ಲಿ ಪದಕದಿಂದ ವಂಚಿತರಾದರು. ಚೀನಾದ ಕ್ಸು ಹಾಂಗ್ ಅವರಿಗಿಂತ 0.1 ಅಂಕ ಕಡಿಮೆ ಗಳಿಸಿದ್ದರಿಂದ ಕಂಚಿನಿಂದ ವಲಾರಿವನ್ ವಂಚಿತರಾದರು. ವಲಾರಿವನ್ 208.3 ಅಂಕಗಳಿಸಿದರು. ಅರ್ಹತಾ ಸುತ್ತಿನಲ್ಲಿ 149 ಶೂಟರ್ಗಳ ಪೈಕಿ ಭಾರತದ ಅಪೂರ್ವಿ, ವಲಾರಿವನ್ ಹಾಗೂ ಅಂಜುಮ್ ಮೌದ್ಗಿಲ್ ಪ್ರಮುಖ ಸುತ್ತಿಗೇರಿದ್ದರು. ಈಗಾಗಲೇ ಅಪೂರ್ವಿ, ಅಂಜುಮ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಹಾಗೂ ದಿವ್ಯಾಂನ್ಶ್ ಸಿಂಗ್ ಒಲಿಂಪಿಕ್ಸ್’ಗೆ ಅರ್ಹತೆ ಪಡೆದಿದ್ದಾರೆ.