ಭಾರತ-ಐರ್ಲೆಂಡ್ ಟಿ20: ಮೊದಲ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸ್ತಾರ ಕೊಹ್ಲಿ?

Ireland vs India: Virat Kohli On The Verge Of Breaking Another Record
Highlights

ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ-ಟ್ವೆಂಟಿ ಸರಣಿಯಲ್ಲಿ ಭಾರತ ತಂಡ ಹಲವು ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದೆ. ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವೆಲ್ಲಾ ದಾಖಲೆ ನಿರ್ಮಿಸಲು ತಯಾರಿ ನಡೆಸಿದ್ದಾರೆ? ಇಲ್ಲಿದೆ ವಿವರ. 

ಡಬ್ಲಿನ್(ಜೂ.27): ಐರ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 2000 ರನ್ ಪೂರೈಸಿದ ಕ್ರಿಕೆಟಿಗ ಅನ್ನೋ ದಾಖಲೆಗೆ ಕೊಹ್ಲಿ ರೆಡಿಯಾಗಿದ್ದಾರೆ.

ಟಿ-ಟ್ವೆಂಟಿ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 53 ಇನ್ನಿಂಗ್ಸ್‌ಗಳಿಂದ 1983 ರನ್ ಸಿಡಿಸಿದ್ದಾರೆ. ಇದೀಗ 2000 ರನ್ ದಾಖಲೆಗೆ ಕೇವಲ 17 ರನ್‌ಗಳ ಅವಶ್ಯಕತೆ ಇದೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ಕೊಹ್ಲಿ ವಿಶ್ವದಾಖಲೆ ಬರೆಯೋ ಸಾಧ್ಯತೆ ಹೆಚ್ಚಿದೆ.

ಟಿ-ಟ್ವೆಂಟಿ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 2000 ರನ್ ಪೂರೈಸಿದ ಕ್ರಿಕೆಟಿಗರಲ್ಲಿ ಸದ್ಯ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಮೊದಲ ಸ್ಥಾನದಲ್ಲಿದ್ದಾರೆ. ಮೆಕ್ಲಮ್ 66 ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ್ದರು. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರೆ, 54 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 2 ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ.

ಟಿ20 ಯಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ 2271 ರನ್ ಸಿಡಿಸೋ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. 2140 ರನ್ ಗಳಿಸಿರುವ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಶೋಯಿಬ್ ಮಲ್ಲಿಕ್ 1989 ರನ್ ಸಿಡಿಸೋ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

ಭಾರತ ಹಾಗೂ ಐರ್ಲೆಂಡ್ ಇಂದು(ಜೂ.27) ಮೊದಲ ಟಿ20 ಪಂದ್ಯ ನಡೆಯಲಿದೆ. ಜೂನ್ 29 ರಂದು ದ್ವಿತೀಯ ಟಿ20 ಆಯೋಜನೆಗೊಳ್ಳಲಿದೆ. ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಎರಡು ಪಂದ್ಯ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ.

loader