ವಿಶಾಖಪಟ್ಟಣಂ(ಮೇ.08): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ರೋಚಕ ಪಂದ್ಯದಲ್ಲಿ ರಿಷಪ್ ಪಂತ್ ಸ್ಫೋಟಕ ಬ್ಯಾಟಿಂಗ್  ಹಾಗೂ ಅಂತಿಮ ಹಂತದಲ್ಲಿ ಮಾಡಿದ ಕೆಲ ಎಡವಟ್ಟುಗಳ ನಡುವೆಯೂ ಡೆಲ್ಲಿ 2 ವಿಕೆಟ್ ಗೆಲುವು ಸಾಧಿಸಿತು.  ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಟಿಕೆಟ್ ಗಿಟ್ಟಿಸಿಕೊಂಡರೆ,  SRH ಟೂರ್ನಿಯಿಂದ ಹೊರಬಿತ್ತು.

ಗೆಲುವಿಗೆ 163 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್, ಉತ್ತಮ ಆರಂಭ ಪಡೆಯಿತು. ಸ್ಥಿರ ಪ್ರದರ್ಶನ ನೀಡುತ್ತಿದ್ದ ಶಿಖರ್ ಧವನ್ ಮಹತ್ವದ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ಆದರೆ ಪೃಥ್ವಿ ಶಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಮೊದಲ ವಿಕೆಟ್‌ಗೆ ಈ ದೋಡಿ 66 ರನ್ ಜೊತೆಯಾಟ ನೀಡಿತು. ಧವನ್ 17 ರನ್ ಸಿಡಿಸಿ ಔಟಾದರು.

ನಾಯಕ ಶ್ರೇಯಸ್ ಅಯ್ಯರ್ ಕೇವಲ 8 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಪೃಥ್ವಿ ಶಾ ಅರ್ಧಶತಕ ಸಿಡಿಸಿ ಮಿಂಚಿದರು. ಪೃಥ್ವಿ 38 ಎಸೆತದಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿ ಔಟಾದರು. ರಿಷಪ್ ಪಂತ್ ಹೋರಾಟ ಮುಂದುವರಿಸಿದರೆ, ಕಾಲಿನ್ ಮುನ್ರೋ 14 ರನ್ ಸಿಡಿಸಿ ಔಟಾದರು. ಅಷ್ಟರಲ್ಲಿ ಡೆಲ್ಲಿ ತಂಡದ ಆತಂಕ ಹೆಚ್ಚಾಯಿತು. ಅಂತಿಮ 18 ಎಸೆತದಲ್ಲಿ ಡೆಲ್ಲಿ ಗೆಲುವಿಗೆ 34 ರನ್ ಬೇಕಿತ್ತು.

18ನೇ ಓವರ್‌ನಲ್ಲಿ ರಿಷಬ್ ಪಂತ್ 2 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಆದರೆ ಶೆರ್ಫಾನೆ ರುದ್‌ಫೋರ್ಡ್ ವಿಕೆಟ್ ಪತನ ಡೆಲ್ಲಿ ಪಾಳಯಲ್ಲಿ ಚಿಂತೆ ಮೂಡಿಸಿತು. ಇತ್ತ ಸಿಕ್ಸರ್ ಮೂಲಕ ಅಬ್ಬರಿಸಿದ ಪಂತ್ 21 ಎಸೆತದಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 49 ರನ್ ಸಿಡಿಸಿ ಔಟಾದರು. ಅಂತಿಮ ಓವರ್‌ನಲ್ಲಿ ಅಮಿತ್ ಮಿಶ್ರಾ ರನ್ನಿಂಗ್ ವೇಳೆ ವಿಕೆಟ್‌ಗೆ ಅಡ್ಡ ಬಂದ  ಕಾರಣ ರನೌಟ್ ನೀಡಲಾಯಿತು. ಹೀಗಾಗಿ ಡೆಲ್ಲಿ ಗೆಲುವಿಗೆ 2 ಎಸೆತದಲ್ಲಿ 2 ರನ್ ಬೇಕಿತ್ತು. ಕೀಮೋ ಪೌಲ್ ಬೌಂಡರಿ ಸಿಡಿಸೋ ಮೂಲಕ ಡೆಲ್ಲಿ ತಂಡಕ್ಕೆ 2 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.  ಇದೀಗ  ಡೆಲ್ಲಿ, ಚೆನ್ನೈ ವಿರುದ್ಧ 2ನೇ ಕ್ವಾಲಿಫೈಯರ್ ಆಡಲಿದೆ.