ಮುಂಬೈ(ಜೂ.2): ಬಾಲಿವುಡ್ ನಟ, ನಿರ್ದೇಶಕ ಅರ್ಬಾಜ್ ಖಾನ್ ಹೆಸರು ಐಪಿಎಲ್ ಬೆಟ್ಟಿಂಗ್ ನಲ್ಲಿ ಕೇಳಿ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬುಕ್ಕಿ ಸೋನು ಜಲನ್, ಬಾಲಿವುಡ್ ನ ಮತ್ತಷ್ಟು ಸೆಲಿಬ್ರಿಟಿಗಳು ಮತ್ತು ಖ್ಯಾತನಾಮರ ಹೆಸರುಗಳನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಸೋನು ಜಲನ್ ವಿಚಾರಣೆ ವೇಳೆ ತನ್ನ ಸಂಪರ್ಕ ಕೇವಲ ಅರ್ಬಾಜ್ ಖಾನ್ ಅಷ್ಟೇ ಅಲ್ಲದೇ ಬಾಲಿವುಡ್ ನ ಇತರ ನಟರ ಜೊತೆಯೂ ಇದೆ ಎಂದು ಹೇಳಿದ್ದಾನೆ. ಅಲ್ಲದೇ ಈ ಖ್ಯಾತನಾಮರೂ ಪಂದ್ಯದ ವೇಳೆ ನಿರ್ದಿಷ್ಟ ತಂಡ ಮತ್ತು ನಿರ್ದಿಷ್ಟ ಆಟಗಾರನ ಪರ ಅಪಾರ ಪ್ರಮಾಣದ ಬೆಟ್ಟಿಂಗ್ ಕಟ್ಟುತ್ತಿದ್ದರು ಎಂದು ಒಪ್ಪಿಕೊಂಡಿದ್ದಾನೆ.

ಅಲ್ಲದೇ ಸೋನು ಜಲನ್ ಕಡೆಯಿಂದ ವಶಪಡಿಸಿಕೊಂಡ ಡೈರಿಯಲ್ಲಿ ಹಲವು ಖ್ಯಾತ ಬಾಲಿವುಡ್ ನಟರ ಹೆಸರುಗಳಿವೆ ಎಂದು ಥಾಣೆಯ ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ. ಸೋನುವಿಗೆ ಕೋಲ್ಕತ್ತಾದ ಬುಕ್ಕಿ ಜೊತೆ ಸಂಪರ್ಕವಿದ್ದು, ಆತನ ಮೂಲಕವೇ ಈ ಅವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಇನ್ನು ಸೋನುವಿಗೆ ಪಾಕಿಸ್ತಾನದ ಕೆಲ ರಾಜಕಾರಣಿಗಳ ಸಂಪರ್ಕವೂ ಇದ್ದು, ಅವರೂ ಕೂಡ ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾದ ಕುರಿತು ಸುಳಿವು ದೊರೆತಿದೆ ಎನ್ನಲಾಗಿದೆ. ಇದೇ ವೇಳೆ ಸೋನು ಜಲಾನ್ ಮತ್ತು ಅರ್ಬಾಜ್ ಖಾನ್ ಜೊತೆಗಿರುವ ಮತ್ತಷ್ಟು ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.