ಬೆಂಗಳೂರು(ನ.18): ಟೀಂ ಇಂಡಿಯಾ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ 2019ರ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡದ ಪಾಲಾಗಲಿದ್ದಾರೆ? ಈ ಪ್ರಶ್ನೆ ಇದೀಗ ಅಭಿಮಾನಿಗಳ ಮನದಲ್ಲಿ ಹುಟ್ಟಿಕೊಂಡಿದೆ. ಕಾರಣ ಕಳೆದ  ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಯುವರಾಜ್ ಸಿಂಗ್ ಈ ಬಾರಿ ತಂಡದಿಂದ ಕೈಬಿಡಲಾಗಿದೆ.

2018ರ ಐಪಿಎಲ್ ಟೂರ್ನಿಯ 6 ಪಂದ್ಯಗಳಿಂದ ಕೇವಲ 65 ರನ್ ಸಿಡಿಸಿದ ಯವರಾಜ್ ಸಿಂಗ್, ಇದೀಗ ಪಂಜಾಬ್ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ 2019ರ ಐಪಿಎಲ್ ಟೂರ್ನಿಯಲ್ಲಿ ಯುವಿಯನ್ನ ಯಾವ ಫ್ರಾಂಚೈಸಿ ಖರೀದಿಸಲಿದೆ ಅನ್ನೋದು ಇದೀಗ ಕುತೂಹಲ ಕೆರಳಿಸಿದೆ.

1 ರಾಯಲ್ ಚಾಲೆಂಜರ್ಸ್ ಬೆಂಗಳೂರು
2018ರ ಐಪಿಎಲ್ ಟೂರ್ನಿಯ 14 ಲೀಗ್ ಪಂದ್ಯಗಳಲ್ಲಿ ಕೇವಲ 6 ಪಂದ್ಯ ಗೆದ್ದು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೀಗ ಬ್ರೆಂಡನ್ ಮೆಕ್ಕಲಂ, ಕೋರಿ ಆಂಡರ್ಸನ್ ಹಾಗೂ ಕ್ರಿಸ್ ವೋಕ್ಸ್‌ರನ್ನ ತಂಡದಿಂದ ಕೈಬಿಡಲಾಗಿದೆ. ಸದ್ಯ ಆರ್‌ಸಿಬಿ ತಂಡದಲ್ಲಿ ಯಾವುದೇ ಭಾರತೀಯ ಆಲ್ರೌಂಡರ್‌ಗಳಿಲ್ಲ. ಇಷ್ಟೇ ಅಲ್ಲ 2014ರಲ್ಲಿ ಯುವರಾಜ್ ಸಿಂಗ್ ಆರ್‌ಸಿಬಿ ತಂಡವನ್ನ ಪ್ರತಿನಿಧಿಸಿದ್ದರು. ನಾಯಕ ವಿರಾಟ್ ಕೊಹ್ಲಿಯ ಅಚ್ಚು ಮೆಚ್ಚಿನ ಕ್ರಿಕೆಟಿಗನಾಗಿರೋ ಯುವಿ ಮತ್ತೆ ಆರ್‌ಸಿಬಿ ತಂಡ ಸೇರಿಕೊಂಡರೂ ಅಚ್ಚರಿಯಿಲ್ಲ.

2 ಡೆಲ್ಲಿ ಡೇರ್‌ಡೆವಿಲ್ಸ್
11 ಐಪಿಎಲ್ ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇಷ್ಟೇ ಅಲ್ಲ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈಗಾಗಲೇ ತಂಡದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್‌ರನ್ನ ಕೈಬಿಡಲಾಗಿದೆ. ಹೀಗಾಗಿ ತಂಡಕ್ಕೆ ಮಾರ್ಗದರ್ಶಕನಾಗಿ, ಹಿರಿಯ ಕ್ರಿಕೆಟಿಗನಾಗಿ ಯುವಿಯನ್ ಖರೀದಿಸೋ ಸಾಧ್ಯತೆ ಇದೆ. 2015ರಲ್ಲಿ ಯುವಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಕಣಕ್ಕಿಳಿದಿದ್ದರು.

3 ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ಕೋಟಾದಲ್ಲಿ ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್‌ರನ್ನ ಮಾತ್ರ ತಂಡ ಉಳಿಸಿಕೊಂಡಿದೆ. ಹೀಗಾಗಿ ತಂಡದಲ್ಲಿ ಭಾರತೀಯ ಆಲ್ರೌಂಡರ್‌ಗಳೇ ಇಲ್ಲ. ಹೀಗಾಗಿ ಹಿರಿಯ ಅಲ್ರೌಂಡರ್ ಆಗಿ ಯುವರಾಜ್ ಸಿಂಗ್ ಖರೀದಿಸುವ ಸಾಧ್ಯತೆಗಳಿವೆ.