ಬೆಂಗಳೂರು(ಏ.30): ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯಕ್ಕೂ ಅಡ್ಡಿಯಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧದ 5 ಓವರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ ನಷ್ಟಕ್ಕೆ 62 ರನ್ ಸಿಡಿಸಿದೆ. 

ಮಳೆಗೂ ಮೊದಲೇ ನಡೆದ ಟಾಸ್‌ ಪ್ರಕ್ರಿಯೆ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್ ಇಳಿದ RCB, ಈ ಆವೃತ್ತಿಯಲ್ಲಿ ಕಾಣದಂತ ಆರಂಭ ಪಡೆಯಿತು. ಆದರೆ ಅಷ್ಟೇ ವೇಗದಲ್ಲಿ ಕುಸಿತ ಕಂಡಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೊದಲ ಎಸೆತದಿಂದಲೇ ಸಿಕ್ಸರ್ ಅಬ್ಬರ ಆರಂಭಿಸಿದರು. ಕೊಹ್ಲಿ 7 ಎಸೆತದಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 25 ರನ್ ಸಿಡಿಸಿ ಔಟಾದರು.

ಕೊಹ್ಲಿ ಔಟಾದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ 10 ರನ್ ಸಿಡಿಸಿ ನಿರ್ಗಮಿಸಿದರು. ಮರು ಎಸೆತದಲ್ಲೇ ಮಾರ್ಕಸ್ ಸ್ಟೊಯ್ನಿಸ್ ವಿಕೆಟ್ ಕಬಳಿಸೋ ಮೂಲಕ ಕನ್ನಡಿಗ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ 12ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಗುರಕೀರತ್ ಸಿಂಗ್ ಮಾನ್ 6 ರನ್ ಸಿಡಿಸಿ ಔಟಾದರು. ಪಾರ್ಥೀವ್ ಪಟೇಲ್ 8 ರನ್ ಸಿಡಿಸಿ ನಿರ್ಗಮಿಸಿದರು. ಪವನ್ ನೇಗಿ 4 ರನ್ ಸಿಡಿಸಿ ಔಟಾದರು. ಈ  ಮೂಲಕ ನಿಗಧಿತ 5 ಓವರ್‌ಗಳಲ್ಲಿ  RCB  7 ವಿಕೆಟ್ ನಷ್ಟಕ್ಕೆ 62 ರನ್ ಸಿಡಿಸಿತು.