ಚೆನ್ನೈ(ಏ.26): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಎರಡು ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ದಡ ಸೇರಿದೆ. ಚೆನ್ನೈನ ಚಿಪಾಕ್ ಮೈದಾನದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 46 ರನ್ ಗೆಲುವು ಸಾಧಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.  

ಗೆಲುವಿಗೆ 156 ರನ್ ಟಾರ್ಗೆಟ್ ಪಡೆದ ಚೆನ್ನೈ ತಂಡಕ್ಕೆ ಮುಂಬೈ ವೇಗಿಗಳು ಶಾಕ್ ನೀಡಿದರು. ಆರಂಭದಲ್ಲೇ ಶೇನ್ ವ್ಯಾಟ್ಸನ್ ವಿಕೆಟ್ ಪತನಗೊಂಡಿತು ವ್ಯಾಟ್ಸನ್ ಕೇವಲ 8 ರನ್ ಸಿಡಿಸಿ ಔಟಾದರು. ನಾಯಕ ಸುರೇಶ್ ರೈನಾ 2 ರನ್ ಸಿಡಿಸಿದರೆ, ಅಂಬಾಟಿ ರಾಯುಡು ಶೂನ್ಯ ಸುತ್ತಿದರು. ಆದರೆ ಮುರಳಿ ವಿಜಯ್ ಹೋರಾಟ ಮುಂದುವರಿಸಿದರು.

ಕೇದಾರ್ ಜಾಧವ್ 6,  ಧ್ರುವ್ ಶೊರೆ 5 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಮುರಳಿ ವಿಜಯ್ 38 ರನ್ ಸಿಡಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. 66 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ csk ಸೋಲಿನ ಹಾದಿ ಹಿಡಿಯಿತು. ಡ್ವೇನ್ ಬ್ರಾವೋ 20 ರನ್ ಸಿಡಿಸಿ ಔಟಾದರು. ದೀಪಕ್ ಚಹಾರ್ ಶೂನ್ಯಕ್ಕೆ ಔಟಾದರು.   ಮಿಚೆಲ್ ಸ್ಯಾಂಟ್ನರ್ 22 ರನ್ ಸಿಡಿಸಿ ಔಟಾಗುತ್ತಿದ್ದಂತೆ csk 17.4 ಓವರ್‌ಗಳಲ್ಲಿ 109 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ 46 ರನ್ ಗೆಲುವು ಸಾಧಿಸಿತು.