ಚೆನ್ನೈ(ಏ.23): ಕನ್ನಡಿಗ ಮನೀಶ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ SRH 3 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ. 

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್  ಟಾಸ್ ಸೋತು ಬ್ಯಾಟಿಂಗ್ ಇಳಿಯಿತು. ಜಾನಿ ಬೈರ್‌ಸ್ಟೋ ಶೂನ್ಯಕ್ಕೆ ಔಟಾದರು. ಈ ಮೂಲಕ ಆರಂಭದಲ್ಲೇ ಆಘಾತ  ಅನುಭವಿಸಿತು. ಆದರೆ ಡೇವಿಡ್ ವಾರ್ನರ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ವಾರ್ನರ್ 45 ಎಸೆತದಲ್ಲಿ 57 ರನ್ ಸಿಡಿಸಿ ಔಟಾದರು.

ವಾರ್ನರ್ ವಿಕೆಟ್ ಪತನದ ಬಳಿಕ ಮನೀಶ್ ಪಾಂಡೆ ಅಬ್ಬರ ಆರಂಭಗೊಂಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಂಡೆ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ವಿಜಯ್ ಶಂಕರ್ 26 ರನ್ ಸಿಡಿಸಿ ಔಟಾದರು. ಅಬ್ಬರಿಸಿದ ಪಾಂಡೆ 49 ಎಸೆತದಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಅಜೇಯ  83 ರನ್ ಸಿಡಿಸಿದರು. ಈ ಮೂಲಕ SRH 3 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತು.