ಕೋಲ್ಕತಾ(ಏ.28): ಸತತ ಸೋಲಿಗೆ ಕೋಲ್ಕತಾ ನೈಟ್ ರೈಡರ್ಸ್ ಅಂತ್ಯ ಹಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಶುಭ್‌ಮಾನ್ ಗಿಲ್ ಹಾಗೂ ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ KKR 34 ರನ್ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ. ಆದರೆ ಕೆಕೆಆರ್ ವಿರುದ್ಧ ಮುಂಬೈ ಸೋತರೂ ಕೆಚ್ಚೆದೆಯ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

233ರನ್ ಟಾರ್ಗೆಟ್ ನೋಡಿದ ಮುಂಬೈ ಇಂಡಿಯನ್ಸ್ ಬೆಚ್ಚಿ ಬಿದ್ದಿತು. ಕ್ವಿಂಟನ್ ಡಿಕಾಕ್ ಶೂನ್ಯ ಸುತ್ತಿದರು. ನಾಯಕ ರೋಹಿತ್ ಶರ್ಮಾ 12 ರನ್ ಸಿಡಿಸಿ ಔಟಾದರು. ಇವಿನ್ ಲಿವಿಸ್ 15, ಸೂರ್ಯಕುಮಾರ್ ಯಾದವ್ 26 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 58 ರನ್‌ಗೆ 4 ವಿಕೆಟ್ ಕಳೆದುಕೊಂಡ ಮುಂಬೈ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು.

ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಪಂದ್ಯದ ಚಿತ್ರಣ ಬದಲಾಯಿಸಿತು.  ಪಾಂಡ್ಯ ಅಬ್ಬರಕ್ಕೆ ಕೆಕೆಆರ್ ಬೌಲರ್‌ಗಳು ದಂಗಾಗಿ ಹೋದರು. ಆದರೆ ಪೊಲಾರ್ಡ್ 20 ರನ್ ಸಿಡಿಸಿ ಔಟಾದರು. ಇತ್ತ ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತದಲ್ಲಿ 7 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಅರ್ಧಶತಕ ಪೂರೈಸಿದರು. ಈ ಮೂಲಕ ಈ ಆವೃತ್ತಿಯ ಅತೀವೇಗದ ಅರ್ಧಶತಕ ದಾಖಲಿಸಿದರು.

ಪೊಲಾರ್ಡ್ ಬಳಿಕ ಪಾಂಡ್ಯ ಬ್ರದರ್ಸ್ ಹೋರಾಟ ಆರಂಭಗೊಂಡಿತು. ಸಿಕ್ಸರ್ ಸುರಿಮಳೆಗೆ ಪಂದ್ಯ ಮುಂಬೈನತ್ತ ವಾಲಿತು. ಅಂತಿಮ 24 ಎಸೆತದಲ್ಲಿ ಮುಂಬೈ ಗೆಲುವಿಗೆ 73 ರನ್ ಬೇಕಿತ್ತು. 300ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ KKR ಬೌಲರ್‌ಗಳನ್ನು ಚೆಂಡಾಡಿದರು. ಕೇವಲ 34 ಎಸೆತದಲ್ಲಿ 9 ಸಿಕ್ಸರ್ ಹಾಗೂ 6 ಬೌಂಡರಿ ನೆರವಿನಿಂದ 91 ರನ್ ಸಿಡಿಸಿ ಔಟಾದರು. ಕೇವಲ 9 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು.

ಪಾಂಡ್ಯ ವಿಕೆಟ್ ಪತನವಾಗುತ್ತಿದ್ದಂತೆ ಕೆಕೆಆರ್ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮುಂಬೈ ಗೆಲುವಿಗೆ ಅಂತಿಮ 6 ಎಸೆತದಲ್ಲಿ 43 ರನ್ ಅವಶ್ಯಕತೆ ಇತ್ತು. ಕ್ರುನಾಲ್ ಪಾಂಡ್ಯ 24 ರನ್ ಸಿಡಿಸಿ ಔಟಾದರು. ಈ ಮೂಲಕ ಮುಂಬೈ  7 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 34 ರನ್ ಗೆಲುವು ಸಾಧಿಸಿದ ಕೆಕೆಆರ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.