ಬೆಂಗಳೂರು[ಮಾ.27]: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಜಸ್ಪ್ರೀತ್ ಬುಮ್ರಾ, RCB ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡಕ್ಕೆ ಬೌಲಿಂಗ್ ಮಾಡಿದರು. ಅರೆ ಬುಮ್ರಾ ಯಾಕೆ ಕೊಹ್ಲಿ ಪಡೆಗೆ ಬೌಲಿಂಗ್ ಮಾಡಿದ್ರು ಎಂದು ದೂರದಿಂದ ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿತರಾದರು.  

ಆದರೆ ಹತ್ತಿರದಿಂದ ನೋಡಿದಾಗಲೇ ಗೊತ್ತಾಗಿದ್ದು, RCB ಪಡೆಗೆ ಬೌಲಿಂಗ್ ಮಾಡಿದ್ದು, ಬುಮ್ರಾ ಅಲ್ಲ, ಬದಲಾಗಿ ಕರ್ನಾಟಕದ ಯುವ ವೇಗಿ ಮಹೇಶ್ ಕುಮಾರ್ P ಎಂದು. ಹೌದು, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿಯೇ ಬೌಲಿಂಗ್ ಮಾಡುವ ಮಹೇಶ್ ಕರ್ನಾಟಕ ಅಂಡರ್ 19 ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ RCB ತಂಡಕ್ಕೆ ನೆಟ್ಸ್’ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ.
ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ 22 ವರ್ಷದ ವೇಗ ಮಹೇಶ್ ಕುಮಾರ್ ಅಂಡರ್ 19 ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಆಗಾಗ್ಗೆ ವಿವಿ ಪುರಂ ಕ್ರಿಕೆಟ್ ಕ್ಲಬ್ ಪರ ಆಡುವ ಅವರು ಒಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. 

RCB ತವರಿನಲ್ಲಿ ಮಾರ್ಚ್ 28ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ನೆಟ್ಸ್’ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ. ಹೀಗಾಗಿ ಬೌಲಿಂಗ್ ಮಾಡಲು ಮಹೇಶ್ ಕುಮಾರ್ ಅವರಿಗೆ ಕರೆ ನೀಡಲಾಯಿತು. ಸತತ ಎರಡನೇ ಬಾರಿಗೆ ಮಹೇಶ್ RCB ಟ್ರೈನಿಂಗ್ ಕ್ಯಾಂಪ್’ನಲ್ಲಿ ಕಾಣಿಸಿಕೊಂಡಿದ್ದಾರೆ. 

ಬೌಲಿಂಗ್ ಶೈಲಿಯ ಬಗ್ಗೆ ಪತ್ರಕರ್ತರು ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ಅನುಕರಿಸಿಲ್ಲ. ನಾನು ಎಂಟನೇ ವಯಸ್ಸಿನಲ್ಲಿದ್ದಾಗಲೇ ಇದೇ ರೀತಿ ಬೌಲಿಂಗ್ ಮಾಡುತ್ತಿದ್ದೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬುಮ್ರಾ ಬೌಲಿಂಗ್ ಮಾಡುವುದನ್ನು ನೋಡಿ, ನಾನೀಗ ವೇಗವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. 2017ರಲ್ಲಿ ಮಹೇಶ್ ಮೊದಲ ಬಾರಿಗೆ ಭಾರತೀಯ ಕ್ರಿಕೆಟಿಗರಿಗೆ ನೆಟ್ಸ್’ನಲ್ಲಿ ಬೌಲಿಂಗ್ ಮಾಡಿದ್ದರು. ಬೆಂಗಳೂರಿನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ನಿರ್ಣಾಯಕ ಟಿ20 ಪಂದ್ಯಕ್ಕೂ ಮುನ್ನ ನೆಟ್ಸ್’ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬೌಲಿಂಗ್ ಮಾಡಿದ್ದರು. ಎಂಜಿನಿಯರ್ ಪದವೀಧರರಾಗಿರುವ ಮಹೇಶ್ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ.

"

ಇನ್ನು ಬುಮ್ರಾ ಅವರನ್ನು ಭೇಟಿಯಾಗಿದ್ದೀರಾ ಎನ್ನುವ ಪ್ರಶ್ನೆಗೆ, ಹೌದು ನಾನು ನೆಟ್ಸ್’ನಲ್ಲಿ ನಾನು ಭೇಟಿಯಾಗಿದ್ದೇನೆ. ಅಲ್ಲಿ ಔಪಚಾರಿಕವಾಗಿ ಬುಮ್ರಾ ಅವರ ಜತೆ ಮಾತನಾಡಿದ್ದೇನೆ. ಅವರ ಬೌಲಿಂಗ್’ನಿಂದ ಪ್ರಭಾವಿತನಾಗಿದ್ದೇನೆ. ಭವಿಷ್ಯದಲ್ಲಿ ಇನ್ನಷ್ಟು ಕಾಲ ಅವರ ಜತೆ ಮಾತನಾಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. 

RCB ಪಂದ್ಯ: ಯೋಧರಿಗೆ ಟಿಕೆಟ್ ಉಚಿತ

ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾ ತಂಡವು ಬೆಂಗಳೂರಿಗೆ ಬಂದಾಗ ಆಸಿಸ್ ಕೋಚ್ ಸಿಬ್ಬಂದಿಯೊಬ್ಬರು ಮೆಲ್ಬರ್ನ್’ಗೆ ಬರಲು ಆಹ್ವಾನಿಸಿದ್ದರು, ಆದರೆ ನಾನು ಅಲ್ಲಿಗೆ ಹೋಗಲು ನಿರಾಕರಿಸಿದೆ ಎಂದಿದ್ದಾರೆ. ಬೆಂಗಳೂರಿನಲ್ಲೇ ಇದ್ದು ಏನನ್ನಾದರು ಸಾಧಿಸಬೇಕು ಎನ್ನುವುದು ಕನ್ನಡದ ಜಸ್ಪ್ರೀತ್ ಬುಮ್ರಾನ ಕನಸು. ಆದಷ್ಟು ಬೇಗ ಆ ಕನಸು ನನಸಾಗಲಿ ಎನ್ನುವುದು ಸುವರ್ಣನ್ಯೂಸ್.ಕಾಂ ಹಾರೈಕೆ.