ಚೆನ್ನೈ(ಏ.23): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಖಚಿತ ಪಡಿಸಿದ ಮೊದಲ ತಂಡ ಅನ್ನೋ ಹೆಗ್ಗಳಿಕೆಗೆ CSK ಪಾತ್ರವಾಗಿದೆ. 

ಗೆಲುವಿಗೆ 176 ರನ್ ಟಾರ್ಗೆಟ್ ಪಡೆದ CSK ಆರಂಭದಲ್ಲೇ ಫಾಫ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡಿತು. ಡುಪ್ಲೆಸಿಸ್ ಕೇವಲ 1 ರನ್ ಸಿಡಿಸಿ ಔಟಾದರು. ಶೇನ್ ವ್ಯಾಟ್ಸನ್ ಹಾಗೂ ಸುರೇಶ್ ರೈನಾ ಹೋರಾಟ ನೀಡಿದರು. ಆದರೆ ರೈನಾ 38 ರನ್ ಸಿಡಿಸಿ ಔಟಾದರು. ಈ ಮೂಲಕ 2ನೇ ವಿಕೆಟ್‌ಗೆ ವ್ಯಾಟ್ಸನ್ ಹಾಗೂ ರೈನಾ 77 ರನ್ ಜೊತೆಯಾಟ ನೀಡಿದರು.

ಶೇನ್ ವ್ಯಾಟ್ಸನ್ ಸ್ಫೋಟಕ ಬ್ಯಾಟಿಂಗ್ ಚೆನ್ನೈ ತಂಡದ ಆತಂಕ ದೂರ ಮಾಡಿತು. ಅರ್ಧಶತಕ ಸಿಡಿಸಿದ ವ್ಯಾಟ್ಸನ್, ಸ್ಲೆಡ್ಜ್ ಮಾಡಿದ ರಶೀದ್ ಖಾನ್ ಓವರ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಬ್ಬರಿಸಿದ ವ್ಯಾಟ್ಸನ್ 53 ಎಸೆತದಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 96 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು.

ವ್ಯಾಟ್ಸನ್ ವಿಕೆಟ್ ಪತನದ ಬಳಿಕ ಅಂಬಾಟಿ ರಾಯುಡು ಹಾಗೂ ಕೇದಾರ್ ಜಾಧವ್ ರನ್ ಗಳಿಸಲು ಪರದಾಡಿದರು. ಹೀಗಾಗಿ CSK ಗೆಲುವಿಗೆ ಅಂತಿಮ 6 ಎಸೆತದಲ್ಲಿ 9 ರನ್ ಬೇಕಿತ್ತು. ಭರ್ಜರಿ ಸಿಕ್ಸರ್ ಸಿಡಿಸಿದ ಕೇದಾರ್ ಗೆಲುವು ಖಚಿತಪಡಿಸಿದರು. 3 ಎಸೆತಕ್ಕೆ 1 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲೇ 21 ರನ್ ಸಿಡಿಸಿದ ಅಂಬಾಟಿ ರಾಯುಡು ವಿಕೆಟ್ ಪತನಗೊಂಡಿತು. ಜಾಧವ್ 1 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 6 ವಿಕೆಟ್ ಗೆಲುವಿನೊಂದಿಗೆ CSK ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿತು.