ಬೆಂಗಳೂರು(ನ.18): 2019ರ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಮಾಡಿದ  ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇದೀಗ ಪ್ರಮುಖ 3 ತಂಡಗಳು 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ನಾಯಕತ್ವ ಬದಲಾಯಿಸಲು ನಿರ್ಧರಿಸಿದೆ.

1 ರಾಜಸ್ಥಾನ ರಾಯಲ್ಸ್
2 ವರ್ಷಗಳ ನಿಷೇಧದ  ಬಳಿಕ 2018ರ ಐಪಿಎಲ್ ಟೂರ್ನಿಗೆ ರಾಜಸ್ಥಾನ ರಾಯಲ್ಸ್ ಕಮ್‌ಬ್ಯಾಕ್ ಮಾಡಿತ್ತು. ಕಳೆದ ಬಾರಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿಕೊಂಡಿದ್ದರು. ಕಳೆದ  ಬಾರಿ ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅಲಭ್ಯರಾಗಿದ್ದರು. ಆದರೆ ಈ ಬಾರಿ ಸ್ಮಿತ್ ನಿಷೇಧದ ಶಿಕ್ಷೆ ಮುಗಿಸಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಈ ಬಾರಿ ರಹಾನೆ ಬದಲು ಸ್ಮಿತ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

2 ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ಹೈದರಬಾದಾ ಕತೆ ಕೂಡ ರಾಜಸ್ಥಾನಕ್ಕಿಂತ ಭಿನ್ನವಾಗಿಲ್ಲ. ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾದ ಡೇವಿಡ್ ವಾರ್ನರ್, ಕಳೆದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಹೀಗಾಗಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿಕೊಂಡಿದ್ದರು. ಈ ಬಾರಿ ಮತ್ತೆ  ಡೇವಿಡ್ ವಾರ್ನರ್ ಹೈದರಾಬಾದ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

3 ಡೆಲ್ಲಿ ಡೇರ್‌ಡೆವಿಲ್ಸ್
ಡೆಲ್ಲಿ ಡೇರ್‌ಡೆವಿಲ್ಸ್ ಕಳೆದ ಆವೃತ್ತಿಯಲ್ಲಿ ಗೌತಮ್ ಗಂಭೀರ್‌ಗೆ ನಾಯಕತ್ವ ನೀಡಿತ್ತು. ಆದರೆ ಗಂಭೀರ್ ಆರಂಭಿಕ ಹಂತದಲ್ಲೇ ನಾಯಕತ್ವದಿಂದ ಕೆಳಗಿಳಿದರು. ಬಳಿಕ ಶ್ರೇಯಸ್ ಅಯ್ಯರ್ ಡೆಲ್ಲಿ ತಂಡವನ್ನ ಮುನ್ನಡೆಸಿದರು. ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡ ತೊರೆದಿರುವ ಶಿಖರ್ ಧವನ್ ಡೆಲ್ಲಿ ತಂಡ  ಸೇರಿಕೊಂಡಿದ್ದಾರೆ. ಹೀಗಾಗಿ ಧವನ್ ಈ ಬಾರಿ  ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.