ಹೈದರಾಬಾದ್‌[ಮಾ.29]: ಮೊದಲ ಪಂದ್ಯದಲ್ಲಿ ‘ಮಂಕಡಿಂಗ್‌’ನಿಂದ ಆಘಾತಕ್ಕೊಳಗಾಗಿ ಗೆಲ್ಲುವ ಪಂದ್ಯವನ್ನು ಸೋತಿದ್ದ ರಾಜಸ್ಥಾನ ರಾಯಲ್ಸ್‌, ಐಪಿಎಲ್‌ 12ನೇ ಆವೃತ್ತಿಯಲ್ಲಿ ಮೊದಲ ಗೆಲುವಿನ ಸಿಹಿ ಸವಿಯಲು ಕಾತರಿಸುತ್ತಿದ್ದು, ಶುಕ್ರವಾರ ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅತಿಥೇಯ ಸನ್‌ರೈಸ​ರ್ಸ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

ಜೋಸ್‌ ಬಟ್ಲರ್‌ರನ್ನು ಪಂಜಾಬ್‌ ತಂಡದ ನಾಯಕ ಆರ್‌.ಅಶ್ವಿನ್‌ ವಿವಾದಾತ್ಮಕ ರೀತಿಯಲ್ಲಿ ರನೌಟ್‌ ಮಾಡಿದ ಬಳಿಕ ಸ್ಟೀವ್‌ ಸ್ಮಿತ್‌ ಹಾಗೂ ಸಂಜು ಸ್ಯಾಮ್ಸನ್‌ ಕ್ರೀಸ್‌ನಲ್ಲಿದ್ದರೂ, ಗೆಲುವಿನ ಗೆರೆ ದಾಟಲು ರಾಜಸ್ಥಾನ ವಿಫಲಗೊಂಡಿತ್ತು. ತಂಡ ಆ ಕಹಿ ಮರೆತು ಹೊಸ ಆರಂಭ ಪಡೆದುಕೊಳ್ಳಲು ಎದುರು ನೋಡುತ್ತಿದೆ.

ಮತ್ತೊಂದೆಡೆ ಭಾರತದ ಕ್ರಿಕೆಟ್‌ ಕಾಶಿ ಈಡನ್‌ ಗಾರ್ಡನ್ಸ್‌ನಲ್ಲಿ ಆ್ಯಂಡ್ರೆ ರಸೆಲ್‌ ಸಿಕ್ಸರ್‌ ಅಬ್ಬರಕ್ಕೆ ಬೆಚ್ಚಿದ್ದ ಸನ್‌ರೈಸ​ರ್ಸ್, ತವರಿನಲ್ಲಿ ಗೆಲುವಿನ ಖಾತೆ ತೆರೆಯಲು ಕಾಯುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯಕ್ಕೆ ಗೈರಾಗಿದ್ದ ಕೇನ್‌ ವಿಲಿಯಮ್ಸನ್‌, ಈ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ಇದ್ದು, ತಂಡ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಇದು ಸನ್‌ರೈಸ​ರ್ಸ್ ಬ್ಯಾಟಿಂಗ್‌ ಬಲ ಹೆಚ್ಚಿಸಲಿದೆ.

ವಾರ್ನರ್‌ ವರ್ಸಸ್‌ ಸ್ಮಿತ್‌: ಆಸ್ಪ್ರೇಲಿಯಾದ ಡೇವಿಡ್‌ ವಾರ್ನರ್‌ ಹಾಗೂ ಸ್ಟೀವ್‌ ಸ್ಮಿತ್‌ ನಡುವಿನ ಪೈಪೋಟಿ ಈ ಪಂದ್ಯದ ಪ್ರಮುಖಾಂಶಗಳಲ್ಲಿ ಒಂದು. ವಾರ್ನರ್‌ ಮೊದಲ ಪಂದ್ಯದಲ್ಲೇ ಆರ್ಭಟಿಸಿದ್ದರು. ಆದರೆ ಸ್ಮಿತ್‌ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಈ ಪಂದ್ಯದಲ್ಲಿ ಬ್ಯಾಟಿಂಗ್‌ ತಾರೆಯರಿಬ್ಬರು ತಮ್ಮ ತಂಡಗಳನ್ನು ಗೆಲುವಿನತ್ತ ಕೊಂಡೊಯ್ಯಲು ಉತ್ಸುಕರಾಗಿದ್ದಾರೆ.

ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ರಾಹುಲ್‌ ತ್ರಿಪಾಠಿಯಂತಹ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವ ಸಾಮರ್ಥ್ಯ ಸನ್‌ರೈಸ​ರ್ಸ್ ಬೌಲರ್‌ಗಳಿಗಿದೆ. ರಶೀದ್‌ ಖಾನ್‌ ಪ್ರಮುಖ ಅಸ್ತ್ರವೆನಿಸಿದ್ದಾರೆ. ಭುವನೇಶ್ವರ್‌ ಕುಮಾರ್‌ ಇತ್ತೀಚಿಗೆ ದುಬಾರಿಯಾಗುತ್ತಿರುವುದು ಸನ್‌ರೈಸ​ರ್ಸ್ ತಲೆನೋವಿಗೆ ಕಾರಣವಾಗಿದೆ. ಡೆತ್‌ ಓವರ್‌ಗಳಲ್ಲಿ ಸುಧಾರಿತ ಪ್ರದರ್ಶನ ತೋರುವ ಒತ್ತಡ ಸನ್‌ರೈಸರ್ಸ್ ಮೇಲಿದೆ. ಇನ್ನು ವಾರ್ನರ್‌ ಜತೆ ಮನೀಶ್‌ ಪಾಂಡೆ, ವಿಜಯ್‌ ಶಂಕರ್‌, ಯೂಸುಫ್‌ ಪಠಾಣ್‌ ಪ್ರಮುಖ ಬ್ಯಾಟ್ಸ್‌ಮನ್‌ಗೆಳಿಸಿದ್ದಾರೆ.

ಒಟ್ಟು ಮುಖಾಮುಖಿ: 09

ಸನ್‌ರೈಸರ್ಸ್: 05

ರಾಜಸ್ಥಾನ: 04

ಸಂಭವನೀಯ ಆಟಗಾರರ ಪಟ್ಟಿ

ಹೈದರಾಬಾದ್‌: ಡೇವಿಡ್‌ ವಾರ್ನರ್‌, ಬೇರ್‌ಸ್ಟೋವ್‌, ಕೇನ್‌ ವಿಲಿಯಮ್ಸನ್‌ (ನಾಯಕ), ಮನೀಶ್‌ ಪಾಂಡೆ, ವಿಜಯ್‌ ಶಂಕರ್‌, ಯೂಸುಫ್‌ ಪಠಾಣ್‌, ಭುವನೇಶ್ವರ್‌ ಕುಮಾರ್‌, ರಶೀದ್‌ ಖಾನ್‌, ಸಿದ್ಧಾರ್ಥ್ ಕೌಲ್‌, ಸಂದೀಪ್‌ ಶರ್ಮಾ, ಶಾಬಾಜ್‌ ನದೀಮ್‌.

ರಾಜಸ್ಥಾನ ರಾಯಲ್ಸ್‌: ಅಜಿಂಕ್ಯ ರಹಾನೆ (ನಾಯಕ), ಜೋಸ್‌ ಬಟ್ಲರ್‌, ಸ್ಟೀವ್‌ ಸ್ಮಿತ್‌, ಸಂಜು ಸ್ಯಾಮ್ಸನ್‌, ರಾಹುಲ್‌ ತ್ರಿಪಾಠಿ, ಬೆನ್‌ ಸ್ಟೋಕ್ಸ್‌, ಕೆ.ಗೌತಮ್‌, ಜೋಫ್ರಾ ಆರ್ಚರ್‌, ಶ್ರೇಯಸ್‌ ಗೋಪಾಲ್‌, ಧವಲ್‌ ಕುಲ್ಕರ್ಣಿ, ಜಯದೇವ್‌ ಉನಾದ್ಕತ್‌.

ಸ್ಥಳ: ಹೈದರಾಬಾದ್‌, ಪಂದ್ಯ ಆರಂಭ: ರಾತ್ರ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ಹೈದರಾಬಾದ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿರಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆ. ಇಲ್ಲಿ ನಡೆದಿರುವ 56 ಐಪಿಎಲ್‌ ಪಂದ್ಯಗಳಲ್ಲಿ 22 ಪಂದ್ಯಗಳನ್ನು ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದರೆ, 33 ಪಂದ್ಯಗಳನ್ನು ಮೊದಲು ಬೌಲ್‌ ಮಾಡಿದ ತಂಡ ಜಯಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಮೊತ್ತ 155 ಆಗಿದ್ದರೂ, ಹಲವು ಪಂದ್ಯಗಳಲ್ಲಿ 200ರ ಆಸುಪಾಸಿನ ಮೊತ್ತ ದಾಖಲಾಗಿದೆ.

ಸ್ಮಿತ್‌, ವಾರ್ನರ್‌ ನಿಷೇಧ ಇಂದಿಗೆ ಮುಕ್ತಾಯ

ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್ 1 ವರ್ಷ ನಿಷೇಧ ಶುಕ್ರವಾರಕ್ಕೆ ಮುಕ್ತಾಯಗೊಳ್ಳಲಿದೆ. ಕಳೆದ ವರ್ಷ ದ.ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಿ 1 ವರ್ಷ ನಿಷೇಧಕ್ಕೆ ಒಳಗಾಗಿದ್ದರು. ನಿಷೇಧ ಮುಕ್ತಾಯಗೊಳ್ಳುವ ದಿನದಂದು ವಾರ್ನರ್‌ ಹಾಗೂ ಸ್ಮಿತ್‌ ಮುಖಾಮುಖಿಯಾಗುತ್ತಿರುವುದು ವಿಶೇಷ.