ಜೈಪುರ[ಏ.07]: ಕ್ರಿಸ್ ಲಿನ್ ಆಕರ್ಷಕ ಅರ್ಧಶತಕ, ಸುನಿಲ್ ನರೈನ್ ಸಿಡಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರು 8 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ದಿನೇಶ್ ಕಾರ್ತಿಕ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ರಾಜಸ್ಥಾನ ನೀಡಿದ್ದ 140 ರನ್’ಗಳ ಗುರಿ ಕೆಕೆಆರ್ ಪಾಲಿಗೆ ಸವಾಲಾಗಿ ಪರಿಣಮಿಸಲೇ ಇಲ್ಲ. ಮೊದಲ ವಿಕೆಟ್’ಗೆ ನರೈನ್-ಲಿನ್ ಜೋಡಿ 8.3 ಓವರ್’ಗಳಲ್ಲಿ 91 ರನ್ ಚಚ್ಚಿದರು. ನರೈನ್ ವಿಕೆಟ್ ಒಪ್ಪಿಸುವ ಮುನ್ನ 25 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್’ಗಳ ನೆರವಿನಿಂದ 47 ರನ್ ಬಾರಿಸಿ ಶ್ರೇಯಸ್ ಗೋಪಾಲ್’ಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಲಿನ್ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 50 ರನ್ ಬಾರಿಸಿ ಶ್ರೇಯಸ್ ಗೋಪಾಲ್’ಗೆ ಎರಡನೇ ಬಲಿಯಾದರು. ಕೊನೆಯಲ್ಲಿ ಉತ್ತಪ್ಪ ಅಜೇಯ 26 ಹಾಗೂ ಶುಭ್’ಮಾನ್ ಗಿಲ್ 6 ರನ್ ಬಾರಿಸಿ ಇನ್ನೂ 37 ಎಸೆತಗಳು ಬಾಕಿ ಇರುವಂತೆಯೇ ಕೆಕೆಆರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ಆರಂಭದಲ್ಲೇ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೆಕೆಆರ್’ಗೆ ಆರಂಭಿಕ ಯಶಸ್ಸು ತಂದಿತ್ತರು. ಆ ಬಳಿಕ ಜತೆಯಾದ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಜೋಸ್ ಬಟ್ಲರ್-ಸ್ಟೀವ್ ಸ್ಮಿತ್ ಜೋಡಿ 2ನೇ ವಿಕೆಟ್’ಗೆ 72 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಬಟ್ಲರ್ 34 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 37 ರನ್ ಬಾರಿಸಿ ಗುರ್ನೆಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಎಚ್ಚರಿಕೆ ಬ್ಯಾಟ್ ಬೀಸಿದ ಸ್ಮಿತ್ 59 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್ ಸಹಿತ ಅಜೇಯ 73 ರನ್ ಚಚ್ಚಿದರು. ಕೊನೆಯಲ್ಲಿ ಸ್ಟೋಕ್ಸ್ 14 ಎಸೆತಗಳನ್ನು ಎದುರಿಸಿ ಕೇವಲ 7 ರನ್ ಬಾರಿಸಿದರು.

ಆಡಿದ 5 ಪಂದ್ಯಗಳಲ್ಲಿ 4 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಕೋಲ್ಕತಾ ನೈಟ್’ರೈಡರ್ಸ್ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇನ್ನು ರಾಜಸ್ಥಾನ ಒಂದು ಗೆಲುವು, 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಮುಂದುವರೆದಿದೆ.

ಸಂಕ್ಷಿಪ್ತ ಸ್ಕೋರ್:
ರಾಜಸ್ಥಾನ ರಾಯಲ್ಸ್: 139/3  

ಸ್ಟೀವ್ ಸ್ಮಿತ್: 25/2

ಗುರ್ನೆ: 25/2

ಕೋಲ್ಕತಾ ನೈಟ್’ರೈಡರ್ಸ್: 140/2

ಲಿನ್: 50

ಶ್ರೇಯಸ್ ಗೋಪಾಲ್: 35/2