ಮೊಹಾಲಿ[ಏ.01]: 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಸದ್ಯ ಅಭಿಮಾನಿಗಳನ್ನು ಹೆಚ್ಚು ಆಕರ್ಷಿಸುತ್ತಿರುವುದು ಕ್ರಿಸ್ ಗೇಲ್‌ರ ದೈತ್ಯ ಸಿಕ್ಸರ್ ಹಾಗೂ ಕಗಿಸೋ ರಬಾಡರ ಪ್ರಚಂಡ ಯಾರ್ಕರ್‌ಗಳು. ಸೋಮವಾರ ಈ ಇಬ್ಬರು ಆಟಗಾರರು ಮುಖಾಮುಖಿಯಾಗಲಿದ್ದಾರೆ. 

ಮೊಹಾಲಿಯಲ್ಲಿ ನಡೆಯಲಿರುವ ಈ ಆವೃತ್ತಿಯ 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ. ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದು, ಜಯದ ಓಟ ಮುಂದುವರಿಸಲು ಕಾತರಿಸುತ್ತಿವೆ. ಮುಂಬೈ ವಿರುದ್ಧ ಅಬ್ಬರಿಸಿದ್ದ ಕರ್ನಾಟಕದ ಕೆ. ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಮೇಲೆ ಪಂಜಾಬ್ ಮತ್ತೆ ನಿರೀಕ್ಷೆ ಇರಿಸಿದೆ.

ಪೃಥ್ವಿ ಶಾ ಡೆಲ್ಲಿ ತಂಡದ ನಂಬಿಕೆಗಳಿಸಿದ್ದು, ಕಳೆದ ಪಂದ್ಯದಲ್ಲಿ ಕೈತಪ್ಪಿದ ಶತಕವನ್ನು ಈ ಪಂದ್ಯದಲ್ಲಿ ಗಳಿಸುವ ಉತ್ಸಾಹದಲ್ಲಿದ್ದಾರೆ. ಎರಡೂ ತಂಡಗಳಿಗೆ ಕೆಲ ಪ್ರಮುಖ ಸಮಸ್ಯೆಗಳು ಕಾಡುತ್ತಿದ್ದು, ಈ ಪಂದ್ಯದಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಲ್ಲಿವೆ.

ಮೊಹಾಲಿ ಪಿಚ್: ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮೊದಲ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ನಿರಾಯಾಸವಾಗಿ ರನ್ ಗಳಿಸಿದ್ದರು. 177 ರನ್ ಗುರಿಯನ್ನು ಪಂಜಾಬ್ ಇನ್ನೂ 8 ಎಸೆತ ಬಾಕಿ ಇರುವಂತೆಯೇ ತಲುಪಿತ್ತು. ಈ ಪಿಚ್‌ನಲ್ಲಿ ಅಶ್ವಿನ್ ಯಶಸ್ಸು ಸಾಧಿಸಿದ್ದರು. ಆದರೆ ಮುಂಬೈನ ಅನನುಭವಿ ಸ್ಪಿನ್ನರ್ಸ್‌ ದುಬಾರಿಯಾಗಿದ್ದರು. 

ಸಂಭಾವ್ಯ ತಂಡ ಹೀಗಿದೆ:

ಕಿಂಗ್ಸ್ ಇಲೆವನ್ ಪಂಜಾಬ್: ಕೆ.ಎಲ್.ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್‌ವಾಲ್, ಡೇವಿಡ್ ಮಿಲ್ಲರ್, ಸರ್ಫರಾಜ್, ಮನ್‌ದೀಪ್, ಆರ್.ಅಶ್ವಿನ್ (ನಾಯಕ), ಹಾರ್ಡಸ್
ವಿಜಿಯೊನ್, ಎಂ.ಅಶ್ವಿನ್, ಮೊಹಮದ್ ಶಮಿ, ಆ್ಯಂಡ್ರೂ ಟೈ.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್(ನಾಯಕ), ರಿಷಭ್ ಪಂತ್, ಕಾಲಿನ್ ಇನ್‌ಗ್ರಾಂ, ಹನುಮ ವಿಹಾರಿ, ಕ್ರಿಸ್ ಮೋರಿಸ್, ಹರ್ಷಲ್ ಪಟೇಲ್,
ಅಮಿತ್ ಮಿಶ್ರಾ, ಸಂದೀಪ್ ಲಮಿಚ್ಚಾನೆ, ಕಗಿಸೋ ರಬಾಡ.

ಮುಖಾಮುಖಿ: 22 
ಪಂಜಾಬ್ ಗೆಲುವು 13, ಡೆಲ್ಲಿ ಗೆಲುವು 09

ಸ್ಥಳ: ಮೊಹಾಲಿ, ಆರಂಭ: ರಾತ್ರಿ 8.00, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1