ನವದೆಹಲಿ(ಆ.04): 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಕ್ರೀಡೆಯನ್ನು ತೆಗೆದುಹಾಕಿದ ಕಾರಣ, ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಲು ಮುಂದಾಗಿರುವ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ)ಗೆ ಹಿನ್ನಡೆಯಾಗಿದೆ. ಹಲವು ಕ್ರೀಡಾಪಟುಗಳು ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳುವುದು ನಮ್ಮ ಹಕ್ಕು ಎಂದು ವಾದಿಸಿರುವ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಂದಿನ ತಿಂಗಳು ತೆಗೆದುಕೊಳ್ಳುವುದಾಗಿ ಐಒಎ ತಿಳಿಸಿದೆ.

ಇದನ್ನೂ ಓದಿ: 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌?

ಇತ್ತೀಚೆಗಷ್ಟೇ ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಲು ಅನುಮತಿ ನೀಡಬೇಕು ಎಂಬ ಮನವಿಯನ್ನು ಐಒಎ, ಕ್ರೀಡಾ ಸಚಿವಾಲಯದ ಮುಂದಿಟ್ಟಿತ್ತು. ಆದರೆ ಇದಕ್ಕೆ ಸರ್ಕಾರದಿಂದ ಪುರಸ್ಕಾರ ಸಿಕ್ಕಿಲ್ಲ. ‘ನಮ್ಮ ಕಾರ್ಯಕಾರಿ ಸಮಿತಿ ಮುಂದಿನ ತಿಂಗಳು ಸಭೆ ಸೇರಲಿದ್ದು, ಬಹಿಷ್ಕಾರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಹೇಳಿದ್ದಾರೆ.

ಇದನ್ನೂ ಓದಿ: ಸುವರ್ಣ ನ್ಯೂಸ್ ಫಲಶೃತಿ: ವೇಟ್’ಲಿಫ್ಟರ್ ಗುರುರಾಜ್’ಗೆ ಬಹುಮಾನ ವಿತರಿಸಿದ ಸಿಎಂ

‘ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್‌ ಪ್ರತಿ ಬಾರಿಯೂ ಐಚ್ಛಿಕ ಕ್ರೀಡೆಯಾಗಿಯೇ ಉಳಿದಿದೆ. ಆದರೂ 1966ರಿಂದ ಪ್ರತಿ ಬಾರಿಯೂ (1970ರಲ್ಲಿ ಹೊರತುಪಡಿಸಿ), ಶೂಟಿಂಗ್‌ಗೆ ಸ್ಥಾನ ನೀಡಲಾಗಿದೆ. ಭಾರತ ಉತ್ತಮ ಪ್ರದರ್ಶನ ತೋರುತ್ತಿರುವಾಗ ದಿಢೀರನೆ ಶೂಟಿಂಗ್‌ ತೆಗೆದುಹಾಕುತ್ತಿರುವುದು ಸರಿಯಲ್ಲ’ ಎಂದು ಮೆಹ್ತಾ ಹೇಳಿದ್ದಾರೆ.