‘ಅಟ್‌'ಲೀಸ್ಟ್ ಸೆಮಿಫೈನಲ್‌'ವರೆಗಾದರೂ ಹೋಗಬೇಕು ಅಂದ್ಕೊಂಡಿದ್ವಿ, ಯಾವಾಗ ಫೈನಲ್‌'ಗೆ ಆಯ್ಕೆಯಾದೆವೋ ಆಗ ಕೊನೆಯ ಬಾಲ್ ತನಕವೂ ಶೇ.100 ರಷ್ಟು ಕ್ಷಮತೆ ಹಾಕಿ ಆಡಬೇಕು ಅನ್ನೋದು ನಮ್ಮ ನಿಲುವಾಗಿತ್ತು. ದುರದೃಷ್ಟವಶಾತ್ ಮ್ಯಾಚ್ ಸೋತಾಗ ರಾತ್ರಿಯಿಡೀ ನಿದ್ದೆ ಬರದೇ ಹೊರಳಾಡುತ್ತಿದ್ದೆ, ಆದರೆ ಇದು ನಮ್ಮ ಮೊದಲ ಪ್ರಯತ್ನ, ಮುಂದೆ ಇನ್ನಷ್ಟು ಪರಿಶ್ರಮ ಹಾಕ್ತೀವಿ ..’ ಅಂತಾರೆ ಈ ಹಾರ್ಡ್ ಹಿಟ್ಟರ್.

ಮೊನ್ನೆ ಮೊನ್ನೆ ಇಂಗ್ಲೆಂಡ್‌'ನ ಡರ್ಬೆ ನಲ್ಲಿ ನಡೆದ ವುಮೆನ್ ಕ್ರಿಕೆಟ್ ಮ್ಯಾಚ್‌'ನ್ನು ನಮ್ಮೂರಿನ ಜನರಿಂದ ಹಿಡಿದು ದೇಶದೆಲ್ಲೆಡೆಯವರು ಹುಚ್ಚೆದ್ದು ನೋಡಿದರು. ಮಹಿಳಾ ಕ್ರಿಕೆಟ್ ಇತಿಹಾಸ ನೋಡಿದರೆ ಹಿಂದೆಂದೂ ಹೀಗಾದದ್ದಿಲ್ಲ. ಆ ಮ್ಯಾಚ್‌ನಲ್ಲಿ ನಮ್ಮ ರಾಜ್ಯದ ಇಬ್ಬರು ಲೇಡಿ ಕ್ರಿಕೆಟರ್ಸ್‌ ಗಮನಸೆಳೆಯುವಂಥ ಸಾಧನೆ ಮಾಡಿದರು.

ವೇದಾ ಕೃಷ್ಣಮೂರ್ತಿ:
‘ ಇದೊಂಥರ ಕ್ರಾಂತಿ’ ಅಂತಾರೆ ವೇದಾ ಕೃಷ್ಣಮೂರ್ತಿ. ಈಕೆ ಮಹಿಳಾ ಕ್ರಿಕೆಟ್ ಟೀಂನ ಸಿಡಿಲಮರಿ ಎಂದೇ ಪ್ರಸಿದ್ಧರಾದವರು. ಊರು ಚಿಕ್ಕಮಗಳೂರಿನ ಕಡೂರು. ಇನ್ನೂ 24ರ ಹರೆಯ. ಚಿಕ್ಕ ವಯಸ್ಸಲ್ಲಿ ಕರಾಟೆ ಕಲಿತಿದ್ದವರು. 12ರ ವಯಸ್ಸಿಗೇ ಕರಾಟೆಯಲ್ಲಿ ಡಬಲ್ ಬ್ಲ್ಯಾಕ್ ಬೆಲ್ಟ್ ಪಡೆದವರು. ಟಾಮ್ ಬಾಯ್ ಥರದ ಹುಡುಗಿ. ಚಿಕ್ಕವಯಸ್ಸಿಂದಲೇ ಹುಡುಗರ ಜೊತೆ ಕ್ರಿಕೆಟ್ ಆಡೋ ಕ್ರೇಜ್. ಆಗಾಗ ಕರಾಟೆಗಿಂತಲೂ ಕ್ರಿಕೆಟೇ ನನಗೆ ಸೂಕ್ತ ಅಂತ ಅನಿಸೋದು. ಪದೇ ಪದೇ ಹೀಗನಿಸತೊಡಗಿದಾಗ ತನ್ನ ಬೆಸ್ಟ್‌'ಫ್ರೆಂಡ್ ಆಗಿರುವ ಅಪ್ಪನಲ್ಲಿ ಇದನ್ನು ಹಂಚಿಕೊಳ್ತಾರೆ. ಮಗಳಿಗೆ ಎಂದೂ ‘ನೋ’ ಎನ್ನದ ಅಪ್ಪ ಇದಕ್ಕೂ ‘ಎಸ್’ ಅಂದುಬಿಟ್ಟರು. ಹಾಗೆ ಕ್ರಿಕೆಟ್‌'ಗೋಸ್ಕರವೇ ಬೆಂಗಳೂರಿಗೆ ಬಂದವರಿಗೆ ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಹಾದಿ ಕಷ್ಟವಾಗಲಿಲ್ಲ. ಮೊನ್ನೆ ವರ್ಲ್ಡ್‌'ಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ವಿಶ್ವದ ಗಮನ ಸೆಳೆದಾಗ ಇವರಿಗೆ ತಮ್ಮ ಆಯ್ಕೆ ಬಗ್ಗೆ ಹೆಮ್ಮೆ ಅನಿಸಿತಂತೆ.

‘ಅಟ್‌'ಲೀಸ್ಟ್ ಸೆಮಿಫೈನಲ್‌'ವರೆಗಾದರೂ ಹೋಗಬೇಕು ಅಂದ್ಕೊಂಡಿದ್ವಿ, ಯಾವಾಗ ಫೈನಲ್‌'ಗೆ ಆಯ್ಕೆಯಾದೆವೋ ಆಗ ಕೊನೆಯ ಬಾಲ್ ತನಕವೂ ಶೇ.100 ರಷ್ಟು ಕ್ಷಮತೆ ಹಾಕಿ ಆಡಬೇಕು ಅನ್ನೋದು ನಮ್ಮ ನಿಲುವಾಗಿತ್ತು. ದುರದೃಷ್ಟವಶಾತ್ ಮ್ಯಾಚ್ ಸೋತಾಗ ರಾತ್ರಿಯಿಡೀ ನಿದ್ದೆ ಬರದೇ ಹೊರಳಾಡುತ್ತಿದ್ದೆ, ಆದರೆ ಇದು ನಮ್ಮ ಮೊದಲ ಪ್ರಯತ್ನ, ಮುಂದೆ ಇನ್ನಷ್ಟು ಪರಿಶ್ರಮ ಹಾಕ್ತೀವಿ ..’ ಅಂತಾರೆ ಈ ಹಾರ್ಡ್ ಹಿಟ್ಟರ್. ಹಿಂದಿನ ಮ್ಯಾಚ್‌'ನಲ್ಲಿನ ಪ್ರದರ್ಶನ ನೋಡಿ ಟೀಂ ತನಗೆ ಫಿನಿಶರ್ ರೋಲ್ ಕೊಟ್ಟಿತ್ತು, ಹಾಗಾಗಿ ಜವಾಬ್ದಾರಿ ಹೆಚ್ಚಿತ್ತು, ಆದರೆ ಅದನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸಬಹುದಾಗಿತ್ತು ಎಂಬ ಸಣ್ಣ ಕೊರಗೂ ಇದೆ ಈ ಬಿಗ್ ಹಿಟ್ಟಿಂಗ್ ಬ್ಯಾಟರ್‌'ಗೆ.

ಮಹಿಳಾ ಕ್ರಿಕೆಟ್ ಕಲಿಗಳಿಗೆ ಸೈ ಎಂದ ಕಿಚ್ಚ ಸುದೀಪ್

‘ಹೆಣ್ಣು ಹುಡುಗಿ ಯಾಕೆ ಕ್ರಿಕೆಟ್ ಆಡ್ತೀಯಾ’ ಅನ್ನೋ ಥರದ ಡಿಸ್‌'ಕರೇಜಿಂಗ್ ಮಾತು ಇಲ್ಲಿಯವರೆಗೂ ಕಿವಿಗೆ ಬಿದ್ದಿದ್ದಿಲ್ಲ. ಯಾವತ್ತೂ ಜೊತೆಗೆ ಆಡುತ್ತಿದ್ದ ಹುಡುಗರು ಸಪೋರ್ಟ್ ಮಾಡುತ್ತಿದ್ದರೇ ವಿನಃ ಯಾರೂ ಅವಮಾನ ಮಾಡುವಂಥ ಮಾತನ್ನಾಡುತ್ತಿರಲಿಲ್ಲ.

ಮನೆಯ ಈ ಕಿರಿಯ ಸದಸ್ಯೆಗೆ ಯಾವತ್ತೂ ತನ್ನ ಮಾತೇ ನಡೀಬೇಕು ಅನ್ನುವ ಹಠ. ಮನೆಯಲ್ಲಷ್ಟೇ ಅಲ್ಲ ಹೊರಗೂ ಹಾಗೆ. ರಾಜ್ಯಮಟ್ಟದ ಆಟಗಳಲ್ಲೆಲ್ಲ ಪರಿಚಯದವರೇ ಇದ್ದ ಕಾರಣ ಏನೂ ತೊಂದರೆಯಾಗುತ್ತಿರಲಿಲ್ಲ. ಯಾವಾಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಸೆಲೆಕ್ಷನ್ ಆಯ್ತೋ ಆವಾಗಿಂದ ಮೊದಲಿನ ಹಾಗೆ ಮುದ್ದಾಗಿ ನೋಡ್ಕೊಳ್ಳೋರಿಲ್ಲದೇ, ತನ್ನ ಕೆಲಸ ತಾನೇ ಮಾಡಬೇಕಾದ ಹೊಣೆಗಾರಿಕೆ ಹೆಗಲೇರಿತು. ‘ಒಂಥರ ಇದು ಒಳ್ಳೆಯದೇ ಆಯ್ತು, ನಾನು ಸ್ವತಂತ್ರವಾಗಿ ಬೆಳೆಯುತ್ತಾ ಹೋದೆ’ ಅಂತಾರೆ ವೇದ. ಡ್ಯಾಶಿಂಗ್ ನೇಚರ್ ಈಕೆಯ ವ್ಯಕ್ತಿತ್ವದಲ್ಲೇ ಇದೆ. ಭಯ, ಹಿಂಜರಿಕೆ ಇಂಥವಕ್ಕೆ ಇವರ ಡಿಕ್ಷನರಿಯಲ್ಲಿ ಜಾಗವೇ ಇಲ್ಲ. ಮೊದಲ ಬಾರಿಗೆ ವಿದೇಶಿಯರೊಂದಿಗೆ ವರ್ಲ್ಡ್‌'ಕಪ್‌ನಲ್ಲಿ ಆಡುವಾಗಲೂ ಸಣ್ಣ ಅಳುಕೂ ಇರಲಿಲ್ಲವಂತೆ. ಯಾರನ್ನೂ ಕ್ಯಾರೇ ಮಾಡುವವಳಲ್ಲ ಅಂಥ ನೇರವಾಗಿ ಹೇಳೋ ದಿಟ್ಟೆಗೆ, ವಿಶ್ವಕಪ್ ಫೈನಲ್ಸ್ ಬಳಿಕದ ಸಂದರ್ಶನದಲ್ಲಿ ನಿರೂಪಕನ ಇಂಗ್ಲೀಷ್ ಮಾತುಗಳನ್ನು ಸಹಆಟಗಾರ್ತಿ, ಕನ್ನಡತಿ ರಾಜೇಶ್ವರಿ ಅವರಿಗೆ ಕನ್ನಡದಲ್ಲಿ ವಿವರಿಸಿದ ಬಗ್ಗೆ ಖುಷಿ ಇದೆ. ಅದು ವೈರಲ್ ಆಗಿದ್ದು ತಿಳಿದಿದೆ.

ರಾಜೇಶ್ವರಿ ಗಾಯಕ್‌'ವಾಡ್:
ರಾಜೇಶ್ವರಿ ಗಾಯಕ್‌ವಾಡ್ ಲೆಫ್ಟ್ ಆರ್ಮ್ ಸ್ಪಿನ್ನರ್. ಮಹಿಳಾ ವಿಶ್ವಕಪ್‌'ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 15 ರನ್‌ಗೆ 5 ವಿಕೆಟ್ ಕೆಡವಿದ ಧೀರ ಯುವತಿ. ಊರು ಬಿಜಾಪುರ. ನಮ್ಮ ದೇಶದ ಮಹಿಳಾ ಟೀಂನ ಬೆಸ್ಟ್ ಬೌಲರ್ ಎಂದು ಗುರುತಿಸಿಕೊಂಡ ಹುಡುಗಿ. ಬಡತನದ ಹಿನ್ನೆಲೆಯಿಂದವರು. ಇವತ್ತಿಗೂ ಸ್ವಂತ ಸೂರಿಲ್ಲ, ಬಾಡಿಗೆ ಮನೆಯಲ್ಲೇ ನಡೆಯುವ ಬದುಕು. ಬೌಲಿಂಗ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸು ಹೊತ್ತು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಬ್ಯಾಟ್, ಬಾಲ್ ಖರೀದಿಸಲೂ ಹಣವಿರಲಿಲ್ಲ. ಎಷ್ಟೋ ಸಲ ಊಟದ ಹಣವನ್ನು ಉಳಿಸಿ ಅದರಿಂದ ಕ್ರಿಕೆಟ್ ಪರಿಕರಗಳನ್ನು ಖರೀದಿಸಿದ್ದಿದೆ. ಅದು 2015 ನೇ ಇಸವಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ವೆಸ್ಟಿಇಂಡೀಸ್ ಮ್ಯಾಚ್ ನಡೆಯುತ್ತಿತ್ತು. ತದೇಕ ಚಿತ್ತದಿಂದ ಮ್ಯಾಚ್ ನೋಡುತ್ತಿದ್ದ ರಾಜೇಶ್ವರಿಗೆ ಸಿಡಿಲನಂತೆ ಬಂದೆರಗಿದ್ದು ತಂದೆಯ ಸಾವಿನ ಸುದ್ದಿ. ಪತ್ನಿ ಮತ್ತು ಮಕ್ಕಳನ್ನು ಅಗಲಿ ಮನೆಯ ಯಜಮಾನ ಇಹಲೋಕ ತ್ಯಜಿಸಿದಾಗ ಇಡೀ ಕುಟುಂಬದ ಜವಾಬ್ದಾರಿ ಈ ಎಳೆಯ ಹೆಗಲನ್ನೇರಿತು. ಅಂದಿನಿಂದ ಕುಟುಂಬದ ಪೋಷಣೆಯ ಜೊತೆಗೆ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಈ ಪೋರಿ ಇನ್ನಿಲ್ಲದಂತೆ ಹೆಣಗುತ್ತಿದ್ದಾರೆ.

‘ಆರಂಭದಲ್ಲಿ ನಾವು ಸೆಮಿಫೈನಲ್ಸ್‌'ಗೆ ಹೋಗೋದೇ ಅನುಮಾನವಿತ್ತು. ಆದರೆ ಫೈನಲ್‌'ವರೆಗೂ ಹೋದಾಗ ನಮ್ಮ ಆತ್ಮವಿಶ್ವಾಸ ಹೆಚ್ಚಿತು. ಅರ್ಧದವರೆಗೆ ಚೆನ್ನಾಗಿಯೇ ಆಡ್ತಿದ್ದೆವು. ಆಮೇಲೇನಾಯ್ತೋ ಇವತ್ತಿಗೂ ಗೊತ್ತಿಲ್ಲ, ಬಹುಶಃ ನಾವು ಅತಿಯಾದ ಒತ್ತಡದಿಂದ ಪ್ಯಾನಿಕ್ ಆದೆವು ಅನಿಸುತ್ತೆ’ ಅಂತ ಫೈನಲ್ ಮ್ಯಾಚ್ ಬಗ್ಗೆ ಹೇಳ್ತಾರೆ. ಆ ವಿಶ್ವಮಟ್ಟದ ವೇದಿಕೆಯಲ್ಲಿ ವೇದ ಜೊತೆಗೆ ಕನ್ನಡ ಮಾತಾಡಿದ್ದು, ಅದು ವೈರಲ್ ಆಗಿದ್ದಕ್ಕೆ ಮುಗುಳ್ನವಿನ ಉತ್ತರವನ್ನಷ್ಟೇ ನೀಡುತ್ತಾರೆ.

ಪುರುಷರ ಕ್ರಿಕೆಟ್‌'ನ ಜನಪ್ರಿಯತೆ ಮೊದಲು ಮಹಿಳೆಯರ ಕ್ರಿಕೆಟ್ ಇರಲಿಲ್ಲ. ಮಹಿಳಾ ಕ್ರಿಕೆಟ್ ಬಗ್ಗೆ ಜೋಕ್‌'ಗಳೇ ಹೆಚ್ಚಾಗಿದ್ವು. ಆದರೆ ಇಂದು ಪುರುಷರ ಟೀಂಗಿಂತ ಹೆಚ್ಚಿನ ಹೆಸರು ಮಹಿಳಾ ತಂಡಕ್ಕಿರುವ ಬಗ್ಗೆ ರಾಜೇಶ್ವರಿಗೆ ಹೆಮ್ಮೆ ಇದೆ. ‘ಇದು ವಿಶ್ವಕಪ್ ಫೈನಲ್ಸ್‌ನಿಂದ ಬಂದ ಜನಪ್ರಿಯತೆ, ಇದೇ ಸಪೋರ್ಟ್ ಮುಂದೆಯೂ ಸಿಗಬೇಕು, ಹಾಗಿದ್ದರೆ ಖಂಡಿತಾ ಮುಂದಿನ ವಿಶ್ವಕಪ್ ನಮ್ಮದೇ’ ಅನ್ನುತ್ತಾರೆ.

‘ಬಿಜಾಪುರದಂಥ ಚಿಕ್ಕ ನಗರದಿಂದ ಬಂದ ರಾಜೇಶ್ವರಿ ಗಾಯಕ್‌ವಾಡ್ ಎಂಬ ಸ್ಪಿನ್ನರ್ ಯುವ ಕ್ರೀಡಾಳುಗಳಿಗೆ ಸ್ಪೂರ್ತಿಯಾಗಿದ್ದಾರೆ’

ಕ್ರಿಕೆಟ್ ಜಗತ್ತಿನ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ರಾಜೇಶ್ವರಿಯನ್ನು ಶ್ಲಾಘಿಸಿ ಆಡಿದ ಮಾತುಗಳಿವು.

ಏಕಕಾಲಕ್ಕೆ ಹರಿದುಬಂದ ಜನಪ್ರಿಯತೆಯ ಮಹಾಪೂರದಲ್ಲಿ ಈ ಹುಡುಗಿ ಕೊಚ್ಚಿಹೋಗಿಲ್ಲ. ತನ್ನ ಸರಳತೆ, ಸಜ್ಜನಿಕೆಯನ್ನು ಉಳಿಸಿಕೊಂಡು ವಿನಯದಿಂದಲೇ ಮಾತನಾಡುತ್ತಾರೆ. ಅದು ಅವರನ್ನು ಇನ್ನಷ್ಟು ಎತ್ತರದಲ್ಲಿರಿಸಿದೆ.

- ಪ್ರಿಯಾ ಕೆರ್ವಾಶೆ, ಕನ್ನಡಪ್ರಭ