ಲೌಡರ್‌ಹಿಲ್(ಆ.04): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದೆ. ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಯಾವುದೇ  ಬದಲಾವಣೆ ಮಾಡಿಲ್ಲ.ಆದರೆ ವೆಸ್ಟ್ ಇಂಡೀಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಜಾನ್ ಕ್ಯಾಂಬೆಲ್ ಬದಲು ಖ್ಯಾರಿ ಪಿಯರೆ ತಂಡ ಸೇರಿಕೊಂಡಿದ್ದಾರೆ. ಕ್ಯಾಂಬೆಲ್ ಅನುಪಸ್ಥಿತಿಯಲ್ಲಿ ಸುನಿಲ್ ನರೈನ್ ಆರಂಭಿಕನಾಗಿ ಬಡ್ತಿ ಪಡೆಯಲಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮಿಂಚಿನ ಪ್ರದರ್ಶನ ನೀಡಿದ್ದರು. ಪದಾರ್ಪಣೆ ಪಂದ್ಯದಲ್ಲಿ ವೇಗಿ ನವದೀಪ್ ಸೈನಿ 3 ವಿಕೆಟ್ ಕಬಳಿಸಿ ಮಿಂಚಿದರು. ಅದ್ಭುತ ಬೌಲಿಂಗ್ ದಾಳಿಯಿಂದ ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 95 ರನ್ ಸಿಡಿಸಿತ್ತು. ಸುಲಭ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಮತ್ತೆ ಬ್ಯಾಟಿಂಗ್ ಸಮಸ್ಯೆ ಎದುರಾಯಿತು. ವಿಶ್ವಕಪ್ ಸೆಮಿಫೈನಲ್ ಪಂದ್ಯ ಸೋಲಿನ ಬಳಿಕವೂ ಟೀಂ ಇಂಡಿಯಾ ಚೇತರಿಸಿಕೊಂಡಿಲ್ಲ. ಭಾರತ 96 ರನ್ ಟಾರ್ಗೆಟ್ ಬೆನ್ನಟ್ಟಲು 17.2 ಓವರ್ ಹಾಗೂ  6  ವಿಕೆಟ್ ಕಳೆದುಕೊಂಡಿತು. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.