ನಾಲ್ಕರ ಘಟ್ಟದ ಪಂದ್ಯದಲ್ಲಿ ಪ್ರಣಯ್, ಜಪಾನ್‌'ನ ಕಜುಮಾಸ ಸಕಾಯಿ ವಿರುದ್ಧ ಸೆಣಸಾಡಿದರೆ, ಶ್ರೀಕಾಂತ್ 2ನೇ ಶ್ರೇಯಾಂಕಿತ ಆಟಗಾರ ಕೊರಿಯಾದ ಸೊನ್ ವಾನ್ ಹೊ ವಿರುದ್ಧ ಕಾದಾಡಲಿದ್ದಾರೆ .
ಜಕಾರ್ತ(ಜೂ.16): ಇಂಡೋನೇಷ್ಯಾ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸ್ಟಾರ್ ಮಹಿಳಾ ಆಟಗಾರ್ತಿಯರು ನಿರಾಸೆ ಮೂಡಿಸಿದರೂ, ಪುರುಷರ ವಿಭಾಗದಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಕಿದಾಂಬಿ ಶ್ರೀಕಾಂತ್ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ಪುರುಷರ ಸಿಂಗಲ್ಸ್ನಲ್ಲಿ ಇಬ್ಬರೂ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಪ್ರೀ- ಕ್ವಾರ್ಟರ್ ಫೈನಲ್'ನಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಲೀ ಚಾಂಗ್ ವೀಗೆ ಆಘಾತ ನೀಡಿದ್ದ ಪ್ರಣಯ್, ಕ್ವಾರ್ಟರ್ ಫೈನಲ್'ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ, ವಿಶ್ವ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ ಗೆಲುವು ಸಾಧಿಸಿ ಬ್ಯಾಡ್ಮಿಂಟನ್ ಲೋಕವನ್ನು ನಿಬ್ಬೆರಗಾಗಿಸಿದ್ದಾರೆ.
ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 8ನೆ ಶ್ರೇಯಾಂಕಿತ ಚೆನ್ ಲಾಂಗ್ ವಿರುದ್ಧ ಪ್ರಣಯ್ 21-18, 16-21, 21-19 ಗೇಮ್'ಗಳಲ್ಲಿ ಗೆಲುವು ಸಾಧಿಸಿದರು.
ಮತ್ತೊಂದು ಅಂಕಣದಲ್ಲಿ ಚೈನೀಸ್ ತೈಪೆಯ ತ್ಸು ವೀ ವಾಂಗ್ ವಿರುದ್ಧ ಸೆಣಸಾಡಿದ ಕಿದಾಂಬಿ ಶ್ರೀಕಾಂತ್, 21-15, 21-14 ನೇರ ಗೇಮ್'ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
ಇನ್ನು ನಾಲ್ಕರ ಘಟ್ಟದ ಪಂದ್ಯದಲ್ಲಿ ಪ್ರಣಯ್, ಜಪಾನ್'ನ ಕಜುಮಾಸ ಸಕಾಯಿ ವಿರುದ್ಧ ಸೆಣಸಾಡಿದರೆ, ಶ್ರೀಕಾಂತ್ 2ನೇ ಶ್ರೇಯಾಂಕಿತ ಆಟಗಾರ ಕೊರಿಯಾದ ಸೊನ್ ವಾನ್ ಹೊ ವಿರುದ್ಧ ಕಾದಾಡಲಿದ್ದಾರೆ .
