ಮೂರನೇ ಕ್ವಾರ್ಟರ್'ನ ಆರಂಭದಲ್ಲಿ ವನಿತೆಯರ ಭಾರತ ತಂಡ 4-0 ಮುನ್ನಡೆ ಪಡೆಯಿತು.

ಆ್ಯಂಟ್ವೆರ್ಪ್(ಸೆ.19): ಡಿಫೆಂಡರ್ ಗುರ್ಜಿತ್ ಕೌರ್ ಮತ್ತು ನಾಯಕಿ ರಾಣಿ ರಾಂಪಾಲ್ ಅವರ ಪ್ರಭಾವಿ ಆಟದ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ, ಯುರೋಪ್ ಪ್ರವಾಸದ ಕೊನೆಯ ಪಂದ್ಯದಲ್ಲಿ ಬೆಲ್ಜಿಯಂ ಕಿರಿಯ ಪುರುಷರ ವಿರುದ್ಧ 4-3 ಗೋಲುಗಳಿಂದ ಗೆಲುವು ಸಾಧಿಸಿದೆ.

ಇಲ್ಲಿನ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ 7, 11ನೇ ನಿಮಿಷ, ರಾಣಿ 13, 33ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಬೆಲ್ಜಿಯಂ ತಂಡದ ಪರ ಟಿಬಾಲ್ಟ್ ನೆವೆನ್ 38ನೇ ನಿಮಿಷದಲ್ಲಿ, ವಿಲಿಯಂ ವಾನ್ 42ನೇ ನಿಮಿಷ, ಮಥಾಯಿಸ್ ರೆಲಿಕ್ 48ನೇ ನಿಮಿಷದಲ್ಲಿ ಗೋಲುಗಳಿಸಿದರು.

ಮೂರನೇ ಕ್ವಾರ್ಟರ್'ನ ಆರಂಭದಲ್ಲಿ ವನಿತೆಯರ ಭಾರತ ತಂಡ 4-0 ಮುನ್ನಡೆ ಪಡೆಯಿತು. ಮೂರನೇ ಕ್ವಾರ್ಟರ್'ನ 5ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ಟಿಬಾಲ್ಟ್ ನೆವೆನ್ ಪೆನಾಲ್ಟಿ ಕಾರ್ನರ್‌'ನಲ್ಲಿ ಗೋಲುಗಳಿಸಿ 1-4 ರಿಂದ ಖಾತೆ ತೆರೆದರು. ಇದಾದ 4ನೇ ನಿಮಿಷದಲ್ಲಿ ವಿಲಿಯಂ ವಾನ್ ಫೀಲ್ಡ್ ಗೋಲು ಬಾರಿಸಿ 2-4 ರಿಂದ ಹಿನ್ನಡೆಯನ್ನು ತಗ್ಗಿಸಿದರು. ಬಳಿಕ 4ನೇ ಕ್ವಾರ್ಟರ್‌'ನ 3ನೇ ನಿಮಿಷದಲ್ಲಿ ಮಥಾಯಿಸ್ ಪೆನಾಲ್ಟಿ ಕಾರ್ನರ್‌'ನಲ್ಲಿ ಗೋಲುಗಳಿಸಿ 3-4 ರಿಂದ ಅಂತರ ಕಡಿಮೆ ಮಾಡಿದರು.