ಸವಿತಾ ಪೂನಿಯಾ ಈ ಪಂದ್ಯದಲ್ಲಷ್ಟೇ ಅಲ್ಲ, ಇಡೀ ಟೂರ್ನಿಯಲ್ಲಿ ಸಮರ್ಥ ರೀತಿಯಲ್ಲಿ ಆಟವಾಡಿದ್ದಾರೆ. ಹೀಗಾಗಿ, ಅವರಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ವೆಸ್ಟ್ ವಾಂಕೂವರ್, ಕೆನಡಾ(ಏ. 10): ಭಾರತ ಮಹಿಳಾ ತಂಡವು ಹಾಕಿ ವಿಶ್ವ ಲೀಗ್'ನ ಎರಡನೇ ಸುತ್ತಿನ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. ಇದರೊಂದಿಗೆ ಮಹಿಳಾ ಹಾಕಿ ವಿಶ್ವ ಲೀಗ್'ನ ಸೆಮಿಫೈನಲ್ ಟೂರ್ನಿಯಲ್ಲಿ ಆಡಲು ಅರ್ಹತೆ ಗಿಟ್ಟಿಸಿದೆ.

ಇಂದು ನಡೆದ ಫೈನಲ್'ನಲ್ಲಿ ಭಾರತ ತಂಡ ಚಿಲಿ ವಿರುದ್ಧ ರೋಚಕ ಗೆಲುವು ಸಾಧಿಸಿ ಪ್ರಶಸ್ತಿ ಜಯಿಸಿದೆ. ಶೂಟೌಟ್'ವರೆಗೂ ಹೋದ ಈ ಪಂದ್ಯದಲ್ಲಿ ಗೋಲ್'ಕೀಪರ್ ಸವಿತಾ ಪೂನಿಯಾ ಅದ್ಭುತ ಪ್ರದರ್ಶನ ನೀಡಿದರು. ಪೂರ್ಣ ಅವಧಿಯಲ್ಲಿ 1-1ರಿಂದ ಡ್ರಾ ಆದ ಕಾರಣ ಫಲಿತಾಂಶ ನಿರ್ಧರಿಸಲು ಶೂಟೌಟ್ ನಡೆಸಲಾಯಿತು. ಇದರಲ್ಲಿ ಭಾರತೀಯರು 3-1ರಿಂದ ಗೆಲುವು ಸಾಧಿಸಿದರು.

ಈ ಪಂದ್ಯದ ಪ್ರಾರಂಭದ ಕ್ಷಣಗಳಲ್ಲಿ ಆಟಕ್ಕೆ ಕುದುರಿಕೊಳ್ಳಲು ಭಾರತೀಯ ವನಿತೆಯರು ತಿಣುಕಾಡಿದ್ದಂತೂ ಹೌದು. 5ನೇ ನಿಮಿಷದಲ್ಲಿ ಮಾರಿಯಾ ಮಾಲ್ಡೊನಾಡೋ ಅವರು ಚಿಲಿಗೆ ಮೊದಲ ಗೋಲು ತಂದಿತ್ತರು. ಗೋಲು ಸಮಬಲ ಸಾಧಿಸಲು ಭಾರತೀಯರು 41ನೇ ನಿಮಿಷದವರೆಗೂ ಕಾಯಬೇಕಾಯಿತು. ಪೆನಾಲ್ಟಿ ಕಾರ್ನರ್'ನಲ್ಲಿ ಅನೂಪಾ ಬಾರ್ಲಾ ಅವರು ಗೋಲು ಗಳಿಸಿದರು. ಅದಾದ ನಂತರ ಭಾರತೀಯ ಮಹಿಳೆಯರು ಕೆಲವಾರು ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದರು. ಇಲ್ಲದಿದ್ದರೆ ಪಂದ್ಯವು ಶೂಟೌಟ್'ವರೆಗೂ ಹೋಗುವ ಸಾಧ್ಯತೆ ಇರಲಿಲ್ಲ.

ಸವಿತಾ ಪೂನಿಯಾ ಈ ಪಂದ್ಯದಲ್ಲಷ್ಟೇ ಅಲ್ಲ, ಇಡೀ ಟೂರ್ನಿಯಲ್ಲಿ ಸಮರ್ಥ ರೀತಿಯಲ್ಲಿ ಆಟವಾಡಿದ್ದಾರೆ. ಹೀಗಾಗಿ, ಅವರಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಬೆಲಾರಸ್ ವಿರುದ್ಧ ಗೆಲುವು:
ಇದಕ್ಕೂ ಮುನ್ನ, ನಿನ್ನೆ ನಡೆದ ಸೆಮಿಫೈನಲ್‌ ಸೆಣಸಾಟದಲ್ಲಿ ನಾಯಕಿ ರಾಣಿ ಹಾಗೂ ಗುರ್ಜಿತ್‌ ಕೌರ್‌ ಬಾರಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಬೆಲಾರಸ್‌ ತಂಡವನ್ನು 4-0 ಗೋಲುಗಳಿಂದ ಭಾರತ ಹಣಿಯಿತು. ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತದ ಪರ 13ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಪೆನಾಲ್ಟಿಗೋಲು ಹೊಡೆದು 1-0 ಮುನ್ನಡೆ ತಂದಿತ್ತರು. ಆ ಬಳಿಕ ನಾಯಕಿ ರಾಣಿ ಮತ್ತೊಂದು ಪೆನಾಲ್ಟಿಅವಕಾಶವನ್ನು ಗೋಲಾಗಿ ಪರಿವರ್ತಿಸಿ 2-0 ಮುನ್ನಡೆ ತಂದಿತ್ತರು. ಇನ್ನು ತೃತೀಯ ಕ್ವಾರ್ಟರ್‌ನ 33ನೇ ನಿಮಿಷದಲ್ಲಿ ಭಾರತ ಮತ್ತೊಂದು ಪೆನಾಲ್ಟಿಅವಕಾಶ ಪಡೆಯಿತಾದರೂ, ಗುರಿ ಮುಟ್ಟುವಲ್ಲಿ ವಿಫಲವಾಯಿತು. ಇತ್ತ 40ನೇ ನಿಮಿಷದಲ್ಲಿ ಬೆಲಾರಸ್‌'ನ ಯುಲಿಯಾ ಬಾರಿಸಿದ ಚೆಂಡನ್ನು ಭಾರತದ ಗೋಲಿ ಸವಿತಾ ಯಶಸ್ವಿಯಾಗಿ ತಡೆದರು. ಆದರೆ, ಇದರ ಬೆನ್ನಿಗೇ ರಾಣಿ ಫೀಲ್ಡ್‌ ಗೋಲು ಬಾರಿಸಿ ಅಂತರವನ್ನು 3-0ಗೆ ವಿಸ್ತರಿಸಿದರೆ, 58ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಬಾರಿಸಿದ ಗೋಲು ತಂಡದ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು.

epaper.kannadaprabha.in