ಭಾರತದ ಬೌಲಿಂಗ್ ದಾಳಿಗೆ ಎದುರಾಳಿ 27 ರನ್‌ಗೆ ಆಲೌಟ್!

Indian Women Begin Asia Cup Campaign With Resounding Win Against Malaysia
Highlights

ಮಹಿಳಾ ಏಷ್ಯಾಕಪ್ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತೀಯ ವನಿತೆಯರ ಪ್ರದರ್ಶನಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಮಲೇಷಿಯಾ ತಂಡವನ್ನ ಕೇವಲ 27 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮಲೇಷಿಯಾ(ಜೂನ್.3): ಮಹಿಳಾ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹರ್ಮನ್‌ಪ್ರೀತಿ ಕೌರ್ ನೇತೃತ್ವದ ಭಾರತ ತಂಡ ಶುಭಾರಂಭ ಮಾಡಿದೆ. ಮಲೇಷಿಯಾದಲ್ಲಿ ಇಂದು ಆರಂಭಗೊಂಡ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಆತಿಥೇಯ ಮಲೇಷಿಯಾ ವಿರುದ್ಧ ಹೋರಾಟ ನಡೆಸಿತ್ತು. ಆಲ್‌ರೌಂಡರ್ ಪ್ರದರ್ಶನದ ಮೂಲಕ ಭಾರತ 142 ರನ್‌ಗಳ ದಾಖಲೆಯ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಮಹಿಳಾ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಸ್ಮೃತಿ ಮಂದನಾ ಕೇವಲ 2 ರನ್ ಗಳಿಸಿ ಔಟಾದರು. ಆದರೆ ಮಿಥಾಲಿ ರಾಜ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಚೇತರಿಸಿಕೊಂಡಿತು. ಇದೇ ವೇಳೆ ಪೂಜಾ ವಸ್ತ್ರಾಕರ್ 16 ರನ್‌ಗಳಿಸಿ ನಿರ್ಗಮಿಸಿದರು. ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಉತ್ತಮ ಪ್ರದರ್ಶನ ನೀಡಿದರು. ಮಿಥಾಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರೆ, ಕೌರ್ 32 ರನ್ ‌ಗಳಿಸಿ ರನೌಟ್‌ಗೆ ಬಲಿಯಾದರು.
 
ಅಂತಿಮ ಹಂತದಲ್ಲಿ ಮಿಥಾಲಿ ಹಾಗೂ ದೀಪ್ತಿ ಶರ್ಮಾ ಜೊತೆಯಾಟ ಭಾರತಕ್ಕೆ ನೆರವಾಯಿತು. ಮಿಥಾಲಿ ಅಜೇಯ 97 ರನ್ ಸಿಡಿಸಿದರೆ, ದೀಪ್ತಿ ಅಜೇಯ 18 ರನ್ ಸಿಡಿಸಿದರು. ಈ ಮೂಲಕ ಭಾರತ ಮಹಿಳಾ ತಂಡ ನಿಗಧಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು. ಮಲೇಷಿಯಾ ಪರ ಐನಾ ಹಮೀಝ್ ಹಶೀಮ್ ಹಾಗೂ ನೂರ್ ಹಯಾತಿ ಝಕಾರಿಯಾ ತಲಾ ಒಂದು ವಿಕೆಟ್ ಪಡೆದರು.

170 ರನ್ ಗುರಿ ಪಡೆದ ಕ್ರಿಕೆಟ್ ಶಿಶು ಮಲೇಷಿಯಾ, ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿತು. ವಿಕೆಟ್ ಉಳಿಸಿಕೊಳ್ಳಲು ಮಲೇಷಿಯಾ ಪರದಾಡಿದರೂ, ಸಾಧ್ಯವಾಗಲಿಲ್ಲ. ಮಲೇಷಿಯಾದ ಆರಂಭಿಕರಾದ ಯುಸ್ರಿನಾ ಯಾಕೂಪ್ ಹಾಗೂ ಕ್ರಿಸ್ಟೀನಾ ಬಾರೆಟ್ ಡಕೌಟ್ ಆದರು. ಒಂದಲ್ಲ ಎರಡಲ್ಲ, ಮಲೇಷಿಯಾದ  ಬರೋಬ್ಬರಿ 6 ಬ್ಯಾಟ್ಸ್‌ಮನ್‌ಗಳು ಶೂನ್ಯ ಸುತ್ತಿದರು.

ಎಲ್ಲಾ ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಿಲ್ಲ. ಸಶಾ ಅಜ್ಮಿ ಸಿಡಿಸಿದ 9 ರನ್ ತಂಡದ ವೈಯುಕ್ತಿಕ ಗರಿಷ್ಠ ಮೊತ್ತವಾಗಿದೆ. 13.4 ಓವರ್‌ಗಳಲ್ಲಿ 27 ರನ್‌ಗಳಿಗೆ ಮಲೇಷಿಯಾ ಆಲೌಟ್ ಆಯಿತು. ಈ ಮೂಲಕ ಭಾರತ 149 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.  ಪೂಜಾ ವಸ್ತ್ರಾಕರ್ 3 ವಿಕೆಟ್ ಪಡೆದರೆ, ಅನುಜಾ ಪಾಟೀಲ್ ಹಾಗೂ ಪೂನಮ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಶಿಖಾ ಪಾಂಡೆ 1 ವಿಕೆಟ್ ಪಡೆದು ಮಿಂಚಿದರು.

ಮಲೇಷಿಯಾ ವಿರುದ್ಧದ ಗೆಲುವಿನೊಂದಿಗೆ ಭಾರತ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಜೂನ್ 4 ರಂದು ನಡೆಯಲಿರುವ ಮಂದಿನ ಪಂದ್ಯದಲ್ಲಿ ಭಾರತ  ಮಹಿಳಾ ತಂಡ, ಥಾಯ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ.

loader