* ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾ ಆಯ್ಕೆ* ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡದ ಆಯ್ಕೆ* ಮಂಡಳಿ ಅಧ್ಯಕ್ಷರ ಇಲವೆನ್'ಗೆ ತಂಡ ಪ್ರಕಟ; ಕನ್ನಡಿಗರಿಗಿಲ್ಲ ಸ್ಥಾನ* ನ. 16ರಿಂದ ಡಿ. 24ರವರೆಗೆ ಭಾರತ-ಲಂಕಾ ಕ್ರಿಕೆಟ್ ಸರಣಿ* ಮುರಳಿ ವಿಜಯ್, ರವೀಂದ್ರ ಜಡೇಜಾ ಕಂಬ್ಯಾಕ್; ಅಭಿನವ್ ಮುಕುಂದ್, ಅಕ್ಷರ್ ಪಟೇಲ್ ಔಟ್
ನವದೆಹಲಿ(ಅ. 23): ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟಿಸಿದ ಬೆನ್ನಲ್ಲೇ, ನವೆಂಬರ್-ಡಿಸೆಂಬರ್'ನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಕ್ರಿಕೆಟ್ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡದ ಆಯ್ಕೆ ಮಾಡಲಾಗಿದೆ. ಟೆಸ್ಟ್ ಸರಣಿಗೆ ಮೊದಲು ಪ್ರವಾಸಿಗರಿಗೆ ಅಭ್ಯಾಸದ ಪಂದ್ಯವಾಡಲು ಭಾರತೀಯ ಮಂಡಳಿ ಅಧ್ಯಕ್ಷರ ಇಲವೆನ್ ತಂಡವನ್ನೂ ಆರಿಸಲಾಗಿದೆ. ಟೆಸ್ಟ್ ತಂಡಕ್ಕೆ ಮುರಳಿ ವಿಜಯ್ ಮತ್ತು ರವೀಂದ್ರ ಜಡೇಜಾ ಕಂಬ್ಯಾಕ್ ಮಾಡಿದ್ದಾರೆ. ತಮಿಳುನಾಡಿನ ಅಭಿನವ್ ಮುಕುಂದ್ ಮತ್ತು ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಹೊರಗುಳಿಸಲಾಗಿದೆ. ರವೀಂದ್ರ ಜಡೇಜಾ ಗಾಯಗೊಂಡಿದ್ದರಿಂದ ಆಸ್ಟ್ರೇಲಿಯಾ ಸರಣಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಎರಡು ಬದಲಾವಣೆ ಬಿಟ್ಟರೆ ಭಾರತ ಟೆಸ್ಟ್ ತಂಡ ಯಥಾಸ್ಥಿತಿ ಕಾಪಾಡಿಕೊಂಡಿದೆ. ಆರ್.ಅಶ್ವಿನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕನ್ನಡಿಗ ಕರುಣ್ ನಾಯರ್'ಗೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗಬಹುದೆಂದು ಕಾದಿದ್ದವರಿಗೆ ನಿರಾಸೆಯಾಗಿದೆ. ಕೆಎಲ್ ರಾಹುಲ್ ಮಾತ್ರವೇ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಅಂದಹಾಗೆ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಮಾತ್ರ ಟೆಸ್ಟ್ ತಂಡದ ಆಯ್ಕೆ ಮಾಡಲಾಗಿದೆ. ಸರಣಿಯ ಉಳಿದ ಪಂದ್ಯಗಳಿಗೆ ಮುಂದಿನ ದಿನಗಳಲ್ಲಿ ತಂಡದ ಆಯ್ಕೆ ಮಾಡುವ ಸಾಧ್ಯತೆ ಇದೆ.
ಮಂಡಳಿ ಅಧ್ಯಕ್ಷರ ತಂಡದಲ್ಲಿಲ್ಲ ಕನ್ನಡಿಗರು:
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ಅಲ್ಇಯ ತಂಡದ ವಿರುದ್ಧ ಮಂಡಳಿ ಅಧ್ಯಕ್ಷರ ಇಲವೆನ್ ತಂಡವು ಎರಡು ಅಭ್ಯಾಸ ಪಂದ್ಯ ಆಡಲಿದೆ. ಆ ತಂಡದ ಆಯ್ಕೆಯೂ ಈಗಲೇ ಆಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್'ಮ್ಯಾನ್ ನಮನ್ ಓಝಾ ಅವರಿಗೆ ನಾಯಕತ್ವದ ಹೊಣೆಯನ್ನೂ ಹೊರಿಸಲಾಗಿದೆ. ಅಭಿಷೇಕ್ ಗುಪ್ತಾ, ರೋಹನ್ ಪ್ರೇಮ್, ಆಕಾಶ್ ಭಂಡಾರಿ, ಮಿಲಿಂದ್, ಅವೇಶ್ ಖಾನ್, ರವಿಕಿರಣ್ ಮೊದಲಾದ ಉದಯೋನ್ಮುಖ ಪ್ರತಿಭೆಗಳಿಗೆ ಮಣೆಹಾಕಲಾಗಿದೆ. ಆದರೆ, ತಂಡದಲ್ಲಿ ಒಬ್ಬನೂ ಕನ್ನಡಿಗನಿಲ್ಲದಿರುವುದು ಗಮನಾರ್ಹ ವಿಚಾರ.
ಯಾವಾಗ ಸರಣಿ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯು ನ.7ರಂದು ಮುಕ್ತಾಯವಾಗುತ್ತದೆ. ಕೆಲ ದಿನಗಳ ನಂತರ ಲಂಕನ್ನರು ಪ್ರವಾಸ ಮಾಡಲಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವೆ ತಲಾ 3 ಪಂದ್ಯಗಳ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳು ನಡೆಯಲಿವೆ. ನ.16 ಮತ್ತು ನ.24ರಂದು ನಡೆಯಲಿರುವ 2 ಟೆಸ್ಟ್ ಪಂದ್ಯಗಳಿಗೆ ಸದ್ಯಕ್ಕೆ ತಂಡದ ಆಯ್ಕೆ ಆಗಿದೆ.
ಮಂಡಳಿ ಅಧ್ಯಕ್ಷರ ಇಲವೆನ್:
ನಮನ್ ಓಝಾ(ನಾಯಕ), ಸಂಜು ಸ್ಯಾಮ್ಸನ್, ಜೀವನ್'ಜ್ಯೋತ್ ಸಿಂಗ್, ಬಿ.ಸಂದೀಪ್, ತನ್ಮಯ್ ಅಗರ್ವಾಲ್, ಅಭಿಷೇಕ್ ಗುಪ್ತಾ, ರೋಹನ್ ಪ್ರೇಮ್, ಆಕಾಶ್ ಭಂಡಾರಿ, ಜಲಜ್ ಸಕ್ಸೇನಾ, ಸಿ.ವಿ.ಮಿಲಿಂದ್, ಅವೇಶ್ ಖಾನ್, ಸಂದೀಪ್ ವಾರಿಯರ್, ರವಿ ಕಿರಣ್.
ಭಾರತ ಟೆಸ್ಟ್ ತಂಡ(2 ಪಂದ್ಯಗಳಿಗೆ):
ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ವೃದ್ಧಿಮಾನ್ ಸಾಹಾ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ.
