* ಕೊಹ್ಲಿ ನಾಯಕತ್ವದ 16 ಸದಸ್ಯರ ತಂಡ ಪ್ರಕಟ* ನ.1ರಿಂದ 7ರವರೆಗೆ ನಡೆಯುವ 3 ಟಿ20 ಪಂದ್ಯಗಳು* ಮೊದಲ ಪಂದ್ಯದ ಬಳಿಕ ಆಶೀಶ್ ನೆಹ್ರಾ ನಿವೃತ್ತಿ* ಜೂನಿಯರ್ ಸ್ಟಾರ್ ಶ್ರೇಯಸ್ ಅಯ್ಯರ್'ಗೆ ಸ್ಥಾನ* ಮನೀಶ್ ಪಾಂಡೆ ಮತ್ತು ಕೆಎಲ್ ರಾಹುಲ್'ಗೆ ಚಾನ್ಸ್
ನವದೆಹಲಿ(ಅ. 23): ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟಿ20 ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ದೇಶೀಯ ಕ್ರಿಕೆಟ್'ನಲ್ಲಿ ಮಿಂಚುತ್ತಿರುವ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ಕೊಡಲಾಗಿದೆ. ಕರ್ನಾಟಕದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಈ ತಂಡದಲ್ಲಿದ್ದಾರೆ. ಕೇದಾರ್ ಜಾಧವ್ ಅವರಿಗೆ ಕೊಕ್ ಕೊಡಲಾಗಿದೆ. ನೆಹ್ರಾ ಒಂದು ಪಂದ್ಯ ಮಾತ್ರ ಆಡುತ್ತಾರೆ.
ಜೂನಿಯರ್ ಕ್ರಿಕೆಟ್'ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಶ್ರೇಯಸ್ ಅಯ್ಯರ್ ಆನಂತರ ದೇಶೀಯ ಕ್ರಿಕೆಟ್'ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಭಾರತ ಎ ತಂಡದ ಪರವಾಗಿಯೂ ಅವರು ಮಿಂಚಿದ್ದಾರೆ. ಭಾರತ ತಂಡದ ಬಾಗಿಲು ತನಗೆ ತೆರೆಯುವ ಕಾಲ ಬರುತ್ತದೆ ಎಂಬ ಆತ್ಮವಿಶ್ವಾಸದಲ್ಲಿದ್ದ ಶ್ರೇಯಸ್ ಅಯ್ಯರ್'ಗೆ ಆ ಕಾಲ ಈಗ ಕೂಡಿ ಬಂದಿದೆ. ಟೀಮ್ ಇಂಡಿಯಾದ ಸೀನಿಯರ್ಸ್'ನಿಂದ ಸಾಧ್ಯವಾದಷ್ಟೂ ಕಲಿಯುವ ತುಡಿತದಲ್ಲಿರುವ ಶ್ರೇಯಸ್ ಅಯ್ಯರ್ ಯಾವುದೇ ಆರ್ಡರ್'ನಲ್ಲೂ ಬ್ಯಾಟಿಂಗ್ ಮಾಡುವ ಇಂಗಿತದಲ್ಲಿದ್ದಾರೆ.
ಹೈದರಾಬಾದ್'ನ 23 ವರ್ಷದ ಮೊಹಮ್ಮದ್ ಸಿರಾಜ್ ಪ್ರತಿಭಾನ್ವಿತ ವೇಗದ ಬೌಲರ್ ಆಗಿದ್ದಾರೆ. ಎಡಗೈ ಬೌಲರ್'ಗಳ ಕೊರತೆಯನ್ನು ಸಿರಾಜ್ ನೀಗಿಸುವ ವಿಶ್ವಾಸದಲ್ಲಿ ಆಯ್ಕೆ ಸಮಿತಿ ಇದೆ.
ಇನ್ನು, ಹಳೆಯ ಹುಲಿ ಆಶೀಶ್ ನೆಹ್ರಾ ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ. ದಿಲ್ಲಿಯ ಫಿರೋಜ್'ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಪಂದ್ಯವೇ ನೆಹ್ರಾ ಅವರಿಗೆ ಕೊನೆಯ ಅಂತಾರಾಷ್ಟ್ರೀಯ ಮ್ಯಾಚ್ ಆಗಲಿದೆ. ಆ ಪಂದ್ಯ ಬಳಿಕ ನೆಹ್ರಾ ರಿಟೈರ್ಮೆಂಟ್ ಘೋಷಿಸಲಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸದ್ಯ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿ ಬಳಿಕ ನವೆಂಬರ್ 1ರಿಂದ ಟಿ20 ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳು ನಡೆಯಲಿದೆ.
ಟಿ20 ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಯುಜವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್'ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಆಶೀಶ್ ನೆಹ್ರಾ ಮತ್ತು ಮೊಹಮ್ಮದ್ ಸಿರಾಜ್.
