ನವದೆಹಲಿ(ಅ. 04): ಬ್ಯಾಂಕ್ ಅಕೌಂಟ್'ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ತಾನು ಅನಿವಾರ್ಯವಾಗಿ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಬೇಕಾಗಬಹುದು ಎಂದು ಬಿಸಿಸಿಐ ತಿಳಿಸಿದ ಬೆನ್ನಲ್ಲೇ ನ್ಯಾ| ಲೋಧಾ ಸಮಿತಿ ಡ್ಯಾಮೇಜ್ ಕಂಟ್ರೋಲ್ ನಡೆಸಿದೆ. ಬಿಸಿಸಿಐನ ಬ್ಯಾಂಕ್ ಅಕೌಂಟ್'ಗಳಿಗೆ ಕಾರ್ಯನಿರ್ವಹಿಸಲು ಅನುಮತಿ ಒದಗಿಸಲಾಗಿದೆ. ಕ್ರಿಕೆಟ್'ನ ದೈನಂದಿನ ಚಟುವಟಿಕೆಗೆ ಯಾವುದೇ ಭಂಗವಾಗಬಾರದು ಎಂದು ಜಸ್ಟಿಸ್ ಆರ್.ಎಂ. ಲೋಧಾ ತಿಳಿಸಿದ್ದಾರೆ.
ಬಿಸಿಸಿಐನ ಬ್ಯಾಂಕ್ ಅಕೌಂಟ್'ಗಳನ್ನು ಅನ್'ಬ್ಲಾಕ್ ಮಾಡುವಂತೆ YES ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್'ಗಳಿಗೆ ಜಸ್ಟಿಸ್ ಲೋಧಾ ಸಮಿತಿ ನಿರ್ದೇಶನ ನೀಡಿರುವುದು ವರದಿಯಾಗಿದೆ.
ಏನಾಗಿತ್ತು?
ನ್ಯಾ| ಲೋಧಾ ನೇತೃತ್ವದ ಸಮಿತಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬ್ಯಾಂಕ್ ಅಕೌಂಟ್'ಗಳನ್ನು ಫ್ರೀಜ್ ಮಾಡುವಂತೆ ಬ್ಯಾಂಕ್'ಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಳು ರದ್ದಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂಬಂತಹ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು.. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಈಗಾಗಲೆ ಎರಡು ಟೆಸ್ಟ್ ಪಂದ್ಯಗಳು ನಡೆದಿದ್ದು, ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ. ಟೆಸ್ಟ್ ಸರಣಿ ಬಳಿಕ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲು ನಿಗದಿಯಾಗಿದೆ. ಈ ಎಲ್ಲ ಪಂದ್ಯಗಳನ್ನು ತಾನು ಅನಿವಾರ್ಯವಾಗಿ ರದ್ದುಗೊಳಿಸಬೇಕಾಗಬಹುದು ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್'ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ಅಷ್ಟೇ ಅಲ್ಲ, ಮುಂದಿನ ವರ್ಷ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ತಂಡ ಭಾಗವಹಿಸದೇ ಹೋಗಬಹುದು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿರುವುದೂ ಕೂಡ ವರದಿಯಾಗಿತ್ತು. ಮೂಲಗಳ ಪ್ರಕಾರ, ಲೋಧಾ ಸಮಿತಿ ಹಾಗೂ ಬಿಸಿಸಿಐ ನಡುವಿನ ಬಿಕ್ಕಟ್ಟು ಬಗೆಹರಿಯದೇ ಹೋಗುವವರೆಗೂ ಭಾರತದ ಹಾಗೂ ಭಾರತದಲ್ಲಿ ಯಾವುದೇ ಅಧಿಕೃತ ಕ್ರಿಕೆಟ್ ಪಂದ್ಯಗಳು ನಡೆಯದೇ ಹೋಗಬಹುದೆನ್ನಲಾಗುತ್ತಿತ್ತು.
"ನ್ಯಾ| ಲೋಧಾ ಸಮಿತಿಯಿಂದ ದೇಶದ ಕ್ರಿಕೆಟ್'ನ ಹಾಗೂ ಬಿಸಿಸಿಐನ ಘನತೆಗೆ ಕುಂದುಂಟಾಗಿದೆ. ಬಿಸಿಸಿಐನ ದಿನನಿತ್ಯದ ಚಟುವಟಿಕೆಯಲ್ಲಿ ತಲೆತೂರಿಸುವ ಅಧಿಕಾರವನ್ನು ಸಮಿತಿ ನೀಡಿಲ್ಲ. ಆಟಗಾರರಿಗೆ ಹಣ ನೀಡದೇ ಆಟ ಹೇಗೆ ಆಡಿಸುವುದು. ಹೀಗಾಗಿ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸುವುದು ಅನಿವಾರ್ಯವಾಗಬಹುದು" ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದು ಎನ್'ಡಿಟಿವಿಯಲ್ಲಿ ವರದಿಯಾಗಿದೆ.
ಲೋಧಾ ಪ್ರತಿಕ್ರಿಯೆ:
ಆಟಗಾರರಿಗೆ ಹಣ ನೀಡಬೇಡಿರಿ ಎಂದು ತಾನೆಲ್ಲೂ ಸೂಚಿಸಿಲ್ಲವೆಂದು ನ್ಯಾ| ಲೋಧಾ ಅವರು ಸ್ಪಷ್ಟಪಡಿಸಿದ್ದಾರೆ. "ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕೆಂದು ನಾವು ಈಮೇಲ್'ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದೆವು. ನಿತ್ಯದ ವ್ಯವಹಾರಗಳಲ್ಲಿ ಹಣದ ವಹಿವಾಟು ಮಾಡಬಾರದು ಎಂದು ನಾವು ಎಲ್ಲೂ ಹೇಳಿರಲಿಲ್ಲ. ಕ್ರಿಕೆಟ್ ಸರಣಿ ಆಯೋಜಿಸುವುದು ಮಾಮೂಲಿಯ ವ್ಯವಹಾರವೇ" ಎಂದು ಎನ್'ಡಿಟಿವಿಗೆ ಜಸ್ಟಿಸ್ ಲೋಧಾ ಹೇಳಿದ್ದಾರೆ. ಇದೀಗ, ಬಿಸಿಸಿಐನ ಬ್ಯಾಂಕ್ ಅಕೌಂಟ್'ಗಳಿಗೆ ಜಸ್ಟಿಸ್ ಲೋಧಾ ಹಸಿರು ನಿಶಾನೆ ನೀಡಿ ಎಲ್ಲಾ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರ ನೀಡಿದ್ದಾರೆ.
