US Open 2022 ಟೆನಿಸ್ ಪಂದ್ಯ ವೀಕ್ಷಿಸಿದ ಟೀಂ ಇಂಡಿಯಾ ದಿಗ್ಗಜ ಧೋನಿ, ಕಪಿಲ್ ದೇವ್
ಯುಎಸ್ ಓಪನ್ ಟೆನಿಸ್ ಪಂದ್ಯ ವೀಕ್ಷಿಸಿದ ಧೋನಿ, ಕಪಿಲ್ ದೇವ್
ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ಕ್ರಿಕೆಟ್ ದಿಗ್ಗಜರು
ಸೆಲಿಬ್ರಿಟಿ ಚೆಫ್ ವಿಕಾಸ್ ಖನ್ನಾ ಅವರ ಜತೆಗೂಡಿ ಯುಎಸ್ ಪಂದ್ಯ ವೀಕ್ಷಿಸಿದ ಕ್ರಿಕೆಟ್ ದಿಗ್ಗಜರು
ನ್ಯೂಜಿಲೆಂಡ್(ಸೆ.10): ಭಾರತ ಕ್ರಿಕೆಟ್ ತಂಡವು ಕಂಡಂತಹ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್, ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಪಂದ್ಯವನ್ನು ವೀಕ್ಷಿಸಿ ಗಮನ ಸೆಳೆದಿದ್ದಾರೆ. ಯುಎಸ್ ಓಪನ್ ಗ್ರ್ಯಾನ್ ಸ್ಲಾಂನ ಪುರುಷರ ಸಿಂಗಲ್ಸ್‌ನ ಕಾರ್ಲೋಸ್ ಆಲ್ಕಾರಾಜ್ ಹಾಗೂ ಜೆನ್ನಿಕ್ ಸಿನ್ನರ್ ನಡುವಿನ ಪಂದ್ಯವನ್ನು ಈ ಇಬ್ಬರು ಕ್ರಿಕೆಟ್ ದಿಗ್ಗಜರು ವೀಕ್ಷಿಸಿದ್ದಾರೆ.
ಭಾರತ ಕ್ರಿಕೆಟ್‌ನ ಈ ಇಬ್ಬರು ದಿಗ್ಗಜರು, ಖ್ಯಾತ ಸೆಲಿಬ್ರಿಟಿ ಚೆಫ್ ವಿಕಾಸ್ ಖನ್ನಾ ಅವರ ಜತೆಗೂಡಿ ಯುಎಸ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ಕುರಿತಂತೆ ಭಾರತದಲ್ಲಿ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪ್ರಸಾರದ ಹಕ್ಕನ್ನು ಹೊಂದಿರುವ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದು, ಭಾರತ ಕ್ರಿಕೆಟ್‌ನ ಸಾರ್ವಭೌಮರು ಯುಎಸ್ ಓಪನ್‌ನಲ್ಲಿ. ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಇಬ್ಬರು ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್, ಆರ್ಥರ್ ಆಶೆ ಕೋರ್ಟ್‌ನ ಸ್ಟ್ಯಾಂಡ್‌ನಲ್ಲಿ ಕುಳಿತು 5 ಗಂಟೆ 15 ನಿಮಿಷಗಳ ಕಾಲ ಭವಿಷ್ಯದ ಯುವ ಚಾಂಪಿಯನ್ನರ ಆಟವನ್ನು ಕಣ್ತುಂಬಿಕೊಂಡರು ಎಂದು ಟ್ವೀಟ್ ಮಾಡಿದೆ.
ಸೆಮಿಫೈನಲ್‌ನಲ್ಲಿ ಬರೋಬ್ಬರಿ 5 ಗಂಟೆಗೂ ಅಧಿಕ ಕಾಲ ನಡೆದ ಕಾದಾಟದಲ್ಲಿ ಕಾರ್ಲೋಸ್ ಆಲ್ಕಾರಾಜ್ 6-3, 6-7(7/9), 6-7(0/7), 7-5,6-3 ಸೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
ಮಹೇಂದ್ರ ಸಿಂಗ್ ಧೋನಿ ಟೆನಿಸ್ ಪಂದ್ಯವನ್ನು ವೀಕ್ಷಿಸುತ್ತಿರುವುದು ಇದೇ ಮೊದಲೇನಲ್ಲ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆನಿಸ್ ಅಭಿಮಾನಿಯಾಗಿದ್ದು, ಕಳೆದ ವರ್ಷ ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂನ ರಾಫೆಲ್ ನಡಾಲ್ ಹಾಗೂ ಟೇಲರ್ ಫ್ರಿಡ್ಜ್ ನಡುವಿನ ಪಂದ್ಯವನ್ನು ವೀಕ್ಷಿಸಿ ಗಮನ ಸೆಳೆದಿದ್ದರು.
ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರ ಹೊರತಾಗಿಯೂ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ತಂಡವು 4 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಧೋನಿ 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮುಂದಿನ ಆವೃತ್ತಿಯಲ್ಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ ಎನ್ನುವುದನ್ನು ಸಿಎಸ್‌ಕೆ ಫ್ರಾಂಚೈಸಿಯು ಖಚಿತಪಡಿಸಿದೆ.